ಬ್ರಿಟೀಷ್ ಆಳ್ವಿಕೆ ಮುನ್ನ ಭಾರತೀಯರಲ್ಲಿ ಏಕತೆ ಇರಲಿಲ್ಲ ಎಂಬ ಗಾಂಧೀಜಿಯ ನಿಲುವು ವಸಾಹತುಶಾಹಿ ಬೋಧನೆಯಿಂದ ರೂಪುಗೊಂಡ ಸುಳ್ಳು ನಿರೂಪಣೆ: ಮೋಹನ್ ಭಾಗವತ್

ಮೋಹನ್ ಭಾಗವತ್ | Photo Credit : PTI
ನಾಗಪುರ: ಬ್ರಿಟೀಷ್ ಆಳ್ವಿಕೆಗೆ ಮುನ್ನ ಭಾರತೀಯರಲ್ಲಿ ಏಕತೆಯ ಕೊರತೆ ಇತ್ತು ಎಂಬ ಮಹಾತ್ಮಾ ಗಾಂಧಿ ಅವರ ಅಭಿಪ್ರಾಯ ವಸಾಹತುಶಾಹಿ ಬೋಧನೆಯಿಂದ ರೂಪುಗೊಂಡ ಸುಳ್ಳು ನಿರೂಪಣೆಯಾಗಿತ್ತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ವರಿಷ್ಠ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗಪುರದಲ್ಲಿ ಶನಿವಾರ ನಡೆದ ಪುಸ್ತಕೋತ್ಸವದಲ್ಲಿ ಅವರು ಮಾತನಾಡಿದರು.
‘‘ಬ್ರಿಟೀಷರು ಭಾರತಕ್ಕೆ ಬರುವ ಮುನ್ನ ನಾವು ಒಗ್ಗಾಟ್ಟಾಗಿರಲಿಲ್ಲ ಎಂದು ಗಾಂಧೀಜಿ ಅವರು ಹಿಂದ್ ಸ್ವರಾಜ್(ಪುಸ್ತಕ)ನಲ್ಲಿ ಬರೆದಿದ್ದಾರೆ. ಆದರೆ, ಅದು ವಸಾಹತುಶಾಹಿ ಬೋಧನೆಯಿಂದ ರೂಪುಗೊಂಡ ತಪ್ಪು ನಿರೂಪಣೆ’’ ಎಂದು ಅವರು ಹೇಳಿದರು.
ಭಾರತದ ರಾಷ್ಟ್ರದ ಪರಿಕಲ್ಪನೆ ಪ್ರಾಚೀನ, ಸಾವಯವ ಹಾಗೂ ಪಾಶ್ಚಿಮಾತ್ಯ ರಾಷ್ಟ್ರದ ಪರಿಕಲ್ಪನೆಗಿಂತ ಮೂಲಭೂತವಾಗಿ ಭಿನ್ನವಾದುದು ಎಂದು ಭಾಗವತ್ ಹೇಳಿದರು.
‘‘ನಮಗೆ ಯಾರೊಂದಿಗೂ ಯಾವುದೇ ವಾದ ಇಲ್ಲ. ನಾವು ವಿವಾದಗಳಿಂದ ದೂರ ಇರುತ್ತೇವೆ. ವಿವಾದಗಳು ನಮ್ಮ ದೇಶದ ಸ್ವಭಾವವಲ್ಲ. ಒಟ್ಟಿಗೆ ಇರುವುದು ಹಾಗೂ ಭಾತೃತ್ವವನ್ನು ಬೆಳೆಸುವುದು ನಮ್ಮ ಸಂಪ್ರದಾಯವಾಗಿದೆ’’ ಎಂದು ಅವರು ತಿಳಿಸಿದರು.
ಒಮ್ಮೆ ಒಂದು ಅಭಿಪ್ರಾಯ ರೂಪುಗೊಂಡರೆ, ಆ ಚಿಂತನೆಯ ಹೊರತಾಗಿ ಬೇರೆ ಯಾವುದೂ ಸ್ವೀಕರಾರ್ಹವಲ್ಲ. ಅವರು ಇತರ ಚಿಂತನೆಗಳಿಗೆ ಬಾಗಿಲು ಮುಚ್ಚಿಕೊಳ್ಳುತ್ತಾರೆ. ಅದನ್ನು ...ಇಸಂ ಎಂದು ಕರೆಯಲು ಆರಂಭಿಸುತ್ತಾರೆ ಎಂದು ಭಾಗವತ್ ಹೇಳಿದರು.







