ಲೈವ್ ಕಾರ್ಯಕ್ರಮದಲ್ಲಿ ಉಸಿರಾಟದ ತೊಂದರೆ: ಗಾಯಕಿ ಮೊನಾಲಿ ಠಾಕೂರ್ ಆಸ್ಪತ್ರೆಗೆ ರವಾನೆ

ಮೊನಾಲಿ ಠಾಕೂರ್ | PC : X \ @monalithakur03
ಹೊಸದಿಲ್ಲಿ: ನೇರ ಪ್ರಸಾರ ಕಾರ್ಯಕ್ರಮವೊಂದರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ, ಗಾಯಕಿ ಮೊನಾಲಿ ಠಾಕೂರ್ ಅವರನ್ನು ಪಶ್ಚಿಮ ಬಂಗಾಳದ ಕೂಚ್ ಬಿಹಾರಿಯ ದಿನ್ಹಾಟಿಯಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಜನವರಿ 21ರ ಸಂಜೆ ಕೂಚ್ ಬಿಹಾರಿಯಲ್ಲಿ ಆಯೋಜಿಸಲಾಗಿದ್ದ ದಿನ್ಹಾಟಾ ಉತ್ಸವದಲ್ಲಿ ಮೊನಾಲಿ ಠಾಕೂರ್ ಅವರ ಗಾಯನ ಕಾರ್ಯಕ್ರಮವಿತ್ತು.
ಈ ನೇರ ಪ್ರಸಾರ ಕಾರ್ಯಕ್ರಮದ ವಿಡಿಯೊ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಗಾಯಕಿ ಮೊನಾಲಿ ಠಾಕೂರ್ ತಮ್ಮ ಗಾಯನದ ನಡುವೆಯೇ ಹಾಡು ಹೇಳುವುದನ್ನು ನಿಲ್ಲಿಸಿರುವುದನ್ನು ಕಾಣಬಹುದಾಗಿದೆ. ಅದಕ್ಕಾಗಿ ಪ್ರೇಕ್ಷಕರ ಕ್ಷಮೆ ಯಾಚಿಸಿರುವ ಮೊನಾಲಿ ಠಾಕೂರ್, ನಂತರ ತಮ್ಮ ಗಾಯನವನ್ನು ಮುಂದುವರಿಸದೆ ಸ್ಥಗಿತಗೊಳಿಸಿರುವುದೂ ಆ ವಿಡಿಯೊದಲ್ಲಿ ಸೆರೆಯಾಗಿದೆ.
“ನಾನು ಪ್ರಾಮಾಣಿಕವಾಗಿ ನಿಮ್ಮ ಕ್ಷಮೆ ಕೋರುತ್ತೇನೆ. ನಾನಿಂದು ತುಂಬಾ ಅಸ್ವಸ್ಥಳಾಗಿದ್ದೇನೆ. ಈ ಪ್ರದರ್ಶನವು ರದ್ದಾಗುವ ಹಂತದಲ್ಲಿದೆ” ಎಂದು ಮೊನಾಲಿ ಠಾಕೂರ್ ಹೇಳುತ್ತಿರುವುದನ್ನು ಆ ವಿಡಿಯೊದಲ್ಲಿ ನೋಡಬಹುದಾಗಿದೆ.
ಮೊನಾಲಿ ಠಾಕೂರ್ ಅವರನ್ನು ಮೊದಲಿಗೆ ದಿನ್ಹಾಟಾ ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಕೂಚ್ ಬಿಹಾರ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಮೊನಾಲಿ ಠಾಕೂರ್ ಅವರನ್ನು ದಾಖಲಿಸಲಾಗಿದ್ದು, ಅವರು ಸದ್ಯ ಚಿಕಿತ್ಸೆಗೊಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ, ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮವೊಂದರ ಮಧ್ಯದಲ್ಲೇ ನಿರ್ಗಮಿಸಿ, ಮೊನಾಲಿ ಠಾಕೂರ್ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು.







