ದಿಲ್ಲಿಯಲ್ಲೊಂದು ನೈಜ ಮನಿ ಹೈಸ್ಟ್ ವೆಬ್ ಸರಣಿ : ಕ್ರೈಂ ಸೀರಿಸ್ ನಿಂದ ಪ್ರೇರಿತಗೊಂಡು ಬರೊಬ್ಬರಿ 150ಕೋಟಿ ರೂ. ವಂಚನೆ

ಹೊಸದಿಲ್ಲಿ : ನೆಟ್‌ಫ್ಲಿಕ್ಸ್ ಮನಿ ಹೈಸ್ಟ್ ವೆಬ್ ಸರಣಿಯಿಂದ ಪ್ರೇರಿತವಾಗಿ ವಂಚಕರ ತಂಡವೊಂದು 150ಕೋಟಿ ರೂ. ದೋಚಿರುವ ಪ್ರಕರಣ ಬಯಲಾಗಿದೆ. ದಿಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
2017ರಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಪ್ರಾರಂಭವಾಗಿದ್ದ ಮನಿ ಹೈಸ್ಟ್ ಹೆಸರಿನ ಸ್ಪ್ಯಾನಿಷ್ ಸರಣಿ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಅದರಲ್ಲಿ ಪ್ರೊಫೆಸರ್ ಹೆಸರಿನ ಸೂತ್ರಧಾರ ವಂಚನೆಯ ಜಾಲ ಹೆಣೆಯುತ್ತಾನೆ. ಆತನ ಸಂಗಾತಿಗಳು ವಿವಿಧ ಪಾತ್ರಗಳಲ್ಲಿ ಆತನಿಗೆ ಸಾಥ್ ನೀಡುತ್ತಾರೆ.
ದಿಲ್ಲಿಯ ಒಂದು ಗ್ಯಾಂಗ್ ಈ ಸರಣಿಯಿಂದ ಪ್ರೇರಿತವಾಗಿ, ಅದರದ್ದೇ ಪಾತ್ರಗಳ ಹೆಸರುಗಳನ್ನು ಇಟ್ಟುಕೊಂಡು, ಷೇರು ಮಾರುಕಟ್ಟೆ ಹೂಡಿಕೆಗಳ ಸೋಗಿನಲ್ಲಿ ದೇಶಾದ್ಯಂತ 300ಕ್ಕೂ ಹೆಚ್ಚು ಜನರಿಗೆ 150 ಕೋಟಿ ಪಂಗನಾಮ ಹಾಕಿದೆ. ಅಲ್ಲದೆ, ವಿವಿಧ ಆನ್‌ಲೈನ್ ವಂಚನೆಗಳ ಮೂಲಕ 23 ಕೋಟಿ ರೂ ಲೂಟಿ ಮಾಡಿದೆ. ಈ ಗ್ಯಾಂಗ್ ವಿದೇಶದಲ್ಲಿ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ನಕಲಿ ಟ್ರೇಡ್ ಅಪ್ಲಿಕೇಶನ್‌ಗಳು, ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿಯನ್ನು ಬಳಸಿದೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.
ವೃತ್ತಿಯಲ್ಲಿ ವಕೀಲನಾದ ಅರ್ಪಿತ್ ಮಿಶ್ರಾ ತನ್ನನ್ನು ಸರಣಿಯಲ್ಲಿರುವ ಪಾತ್ರವಾದ ಪ್ರೊಫೆಸರ್ ಎಂದು ಕರೆದುಕೊಂಡಿದ್ದ. ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರಭಾತ್ ವಾಜಪೇಯಿ ಎಂಬಾತ ಅಮಾಂಡ ಎಂದು ಹೆಸರಿಟ್ಟುಕೊಂಡಿದ್ದ ಮತ್ತು ಅಬ್ಬಾಸ್ ಎಂಬವನು ಫ್ರೆಡ್ಡಿ ಎಂಬ ಹೆಸರಿಟ್ಟುಕೊಂಡಿದ್ದ. ಅವರು ಒಟ್ಟಾಗಿ, ಸೋಷಿಯಲ್ ಮೀಡಿಯಾದಲ್ಲಿ ಹಲವಾರು ರಹಸ್ಯ ಗ್ರೂಪ್ಗಳನ್ನು ರಚಿಸಿ, ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭದ ಭರವಸೆಯೊಂದಿಗೆ ಜನರಿಗೆ ಆಮಿಷವೊಡ್ಡುತ್ತಿದ್ದರು.
ಈ ಕುರಿತು ರೋಹಿತ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಆ ಬಳಿಕ ಈ ವಂಚನೆ ಬಯಲಾಗಿದೆ. ವಂಚಕರು ಪ್ರತಿಷ್ಠಿತ ಹಣಕಾಸು ಸೇವಾ ಸಂಸ್ಥೆಯ ಪ್ರತಿನಿಧಿಗಳಂತೆ ನಟಿಸಿ ಅವರನ್ನು ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದರು. ಅಲ್ಲಿ ದೈನಂದಿನ ಷೇರು ಮಾರುಕಟ್ಟೆ ಸಲಹೆಗಳನ್ನು ನೀಡಲಾಗುತ್ತಿತ್ತು. ಹೂಡಿಕೆಗಳು ಹೆಚ್ಚಿನ ಲಾಭವನ್ನು ನೀಡುತ್ತವೆ ಎಂದು ನಂಬಿಸಿ, ನೇರ ಮಾರುಕಟ್ಟೆ ಖಾತೆಯಲ್ಲಿ ಹೂಡಿಕೆ ಮಾಡಲು ಅವರು ಕ್ರಮೇಣ ಮನಸ್ಸು ಮಾಡಿದ್ದರು.
ವರದಿಗಳ ಪ್ರಕಾರ, ಈ ಗ್ಯಾಂಗ್ ಇದೇ ರೀತಿ 300ಕ್ಕೂ ಹೆಚ್ಚು ಜನರಿಗೆ ಆಮಿಷವೊಡ್ಡಿ, 150 ಕೋಟಿಗೂ ಅಧಿಕ ಹಣವನ್ನು ವಂಚಿಸಿದೆ. ಇದಲ್ಲದೆ, ಡಿಜಿಟಲ್ ಅರೆಸ್ಟ್, ಲಾಟರಿ ವಂಚನೆಯಂತಹ ವಿವಿಧ ಆನ್‌ಲೈನ್ ವಂಚನೆಗಳ ಮೂಲಕ ಇನ್ನೂ 23 ಕೋಟಿ ರೂ. ದೋಚಿದೆ. ಇದರಲ್ಲಿ ಮ್ಯೂಲ್ ಖಾತೆಗಳು ಮತ್ತು ಹವಾಲಾ ವಹಿವಾಟುಗಳ ಮೂಲಕ ಮರೆಮಾಚಲಾದ ಹಣವೂ ಸೇರಿದೆ. ಈ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ, ಅಂತಾರಾಷ್ಟ್ರೀಯ ಸಿಂಡಿಕೇಟ್ ಕಾರ್ಯನಿರ್ವಹಿಸುವ ಚೀನಾ ಮತ್ತು ಕಾಂಬೋಡಿಯಾದಲ್ಲಿನ ಹ್ಯಾಂಡ್ಲರ್‌ಗಳಿಗೆ ವರ್ಗಾಯಿಸಲಾಗಿದೆ ಎಂಬುದು ತನಿಖೆಯ ವೇಳೆ ಬಹಿರಂಗಗೊಂಡಿದೆ.
ಗ್ಯಾಂಗ್ ಸದಸ್ಯರಲ್ಲಿ ಹೆಚ್ಚಿನವರು ವಿದ್ಯಾವಂತರು ಮತ್ತು ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರು. ಆರೋಪಿಗಳಿಂದ ಪೊಲೀಸರು 14 ಮೊಬೈಲ್ ಫೋನ್‌ಗಳು, 17 ರಿಂದ 20 ಸಿಮ್ ಕಾರ್ಡ್‌ಗಳು, 12 ಬ್ಯಾಂಕ್ ಪಾಸ್‌ಬುಕ್‌ಗಳು,
32 ಡೆಬಿಟ್ ಕಾರ್ಡ್‌ಗಳು ಮತ್ತು 1,000ಕ್ಕೂ ಹೆಚ್ಚು ಜನರೊಂದಿಗೆ ಅವರು ನಡೆಸಿದ ಚಾಟ್‌ಗಳು ಮತ್ತು
ವಹಿವಾಟುಗಳ ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಗ್ಯಾಂಗ್ ಸದಸ್ಯರು ಸಾಮಾನ್ಯವಾಗಿ ಐಶಾರಾಮಿ ಹೋಟೆಲ್ ಗಳಲ್ಲಿ ಉಳಿದುಕೊಂಡು ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳ ಮೂಲಕವೇ ತಮ್ಮ ವಂಚನೆಯ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ನೋಯ್ಡಾ ಹಾಗೂ ಪಶ್ಚಿಮ ಬಂಗಾಳದ ಸಿಲಿಗುರಿ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ. ಪೊಲೀಸರು ಈ ಗ್ಯಾಂಗ್‌ನ ವಿದೇಶಿ ಸಂಪರ್ಕಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಅದಕ್ಕಾಗಿ ಇಂಟರ್ಪೋಲ್ ಸಹಾಯ ಪಡೆಯುತ್ತಿದ್ದಾರೆ.
ಈ ವಂಚನೆಯಲ್ಲಿ ಅಂತಾರಾಷ್ಟ್ರೀಯ ಸೈಬರ್ ಮಾಫಿಯಾ ಭಾಗಿಯಾಗಿದೆ ಎಂದು ಪೊಲೀಸರು ಶಂಕಿಸುತ್ತಿರುವುದರಿಂದ ಚೀನಾದ ಜಾಡು ಹಿಡಿಯಲಾಗಿದೆ. 2024ರ 5,000 ಕೋಟಿ ಮೌಲ್ಯದ ಚೀನೀ ಅಪ್ಲಿಕೇಶನ್‌ಗಳ ಹಗರಣದಲ್ಲಿ ಇದೇ ರೀತಿಯ ವಂಚನೆಯ ಮಾದರಿ ಕಂಡುಬಂದಿತ್ತು.
ವರದಿಗಳ ಪ್ರಕಾರ, ಪೊಲೀಸ್ ವಿಚಾರಣೆಯ ಸಮಯದಲ್ಲಿ, ಅರ್ಪಿತ್ ಮಿಶ್ರಾ ಚೀನೀ ಹ್ಯಾಂಡ್ಲರ್‌ಗಳೊಂದಿಗೆ ನೇರ ಸಂಪರ್ಕದಲ್ಲಿರುವುದನ್ನು ಬಾಯ್ಬಿಟ್ಟಿದ್ದಾನೆ. ಬ್ಯಾಂಕ್ ವಿವರಗಳು, ಹಣಕಾಸಿನ ರುಜುವಾತುಗಳು ಮತ್ತು OTPಗಳನ್ನು ಸಂಗ್ರಹಿಸಿ, ಎಲ್ಲಾ ಮಾಹಿತಿಯನ್ನು ನಂತರ ಚೀನಾ ಮತ್ತು ಕಾಂಬೋಡಿಯಾ ಮೂಲದ ವಂಚಕರೊಂದಿಗೆ ಹಂಚಿಕೊಳ್ಳಲಾಗಿತ್ತೆಂಬುದು ತನಿಖೆಯ ವೇಳೆ ತಿಳಿದು ಬಂದಿದೆ.







