ಹಣ ಅಕ್ರಮ ವರ್ಗಾವಣೆ ಪ್ರಕರಣ | ಅನಿಲ್ ಅಂಬಾನಿ ಪುತ್ರನ ಎರಡನೇ ದಿನವೂ ವಿಚಾರಣೆ ನಡೆಸಿದ ಈಡಿ

ಅನ್ಮೋಲ್ ಅಂಬಾನಿ , ಅನಿಲ್ ಅಂಬಾನಿ | Photo Credit ; PTI
ಹೊಸದಿಲ್ಲಿ, ಡಿ. 20: ಬ್ಯಾಂಕ್ ಸಾಲ ವಂಚನೆ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋಲ್ ಅಂಬಾನಿ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ (ಈಡಿ) ಎರಡನೇ ದಿನವಾದ ಶನಿವಾರ ಕೂಡ ಮುಂದುವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
34 ವರ್ಷದ ಜೈ ಅನ್ಮೋಲ್ ಅಂಬಾನಿ ಅವರ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಶುಕ್ರವಾರ ಮೊದಲ ಬಾರಿಗೆ ದಾಖಲಿಸಿಕೊಳ್ಳಲಾಗಿತ್ತು. ವಿಚಾರಣೆ ಶನಿವಾರ ಕೂಡ ಮುಂದುವರಿಯಿತು ಎಂದು ಅವರು ಹೇಳಿದ್ದಾರೆ.
ರಿಲಯನ್ಸ್ ಅನಿಲ್ ಧೀರೂಬಾಯಿ ಅಂಬಾನಿ ಸಮೂಹ (ಎಡಿಎಜಿ) ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಜಾರಿ ನಿರ್ದೇಶನಾಲಯದ ತನಿಖೆ ಯೆಸ್ ಬ್ಯಾಂಕ್ ಗೆ ಸಂಬಂಧಿಸಿದೆ. ಯೆಸ್ ಬ್ಯಾಂಕ್ಗೆ ರಿಲಾಯನ್ಸ್ ಅನಿಲ್ ಧೀರೂಬಾಯಿ ಅಂಬಾನಿ ಸಮೂಹ 2017 ಮಾರ್ಚ್ 31ಕ್ಕೆ ಪಾವತಿಸಬೇಕಾದ ಮೊತ್ತ ಸುಮಾರು 6,000 ಕೋಟಿ ರೂ. ಆಗಿತ್ತು. ಅದರೆ, ಅದು ಬಂದಿಲ್ಲ. ಈ ಮೊತ್ತ ಒಂದು ವರ್ಷದಲ್ಲಿ ದ್ವಿಗುಣಗೊಂಡಿದ್ದು, 13,000 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಒಳಗೊಂಡಿರುವ ಕಂಪೆನಿಗಳಲ್ಲಿ ರಿಲಾಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್ಎಚ್ಎಫ್ಎಲ್) ಹಾಗೂ ರಿಲಾಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (ಆರ್ಸಿಎಫ್ಎಲ್) ಗಳು ಸೇರಿವೆ.







