ಆರ್ಥಿಕ ಅಪರಾಧಿ ಮೋನಿಕಾ ಕಪೂರ್ ಅಮೆರಿಕದಲ್ಲಿ ಸಿಬಿಐ ವಶಕ್ಕೆ

ಮೋನಿಕಾ ಕಪೂರ್ | PC : NDTV
ಹೊಸದಿಲ್ಲಿ: ಆರ್ಥಿಕ ಅಪರಾಧಿ ಎಂದು ಆರೋಪಿಸಲಾಗಿರುವ ಮೋನಿಕಾ ಕಪೂರ್ ಅವರನ್ನು ಅಮೆರಿಕವು ಸಿಬಿಐಗೆ ಹಸ್ತಾಂತರಿಸಿದೆ. ಕಪೂರ್ 25 ವರ್ಷಗಳಿಗೂ ಅಧಿಕ ಸಮಯದಿಂದ ಕಾನೂನಿನ ಹಿಡಿತದಿಂದ ತಪ್ಪಿಸಿಕೊಂಡಿದ್ದರು.
ಅಮೆರಿಕದಲ್ಲಿ ಕಪೂರ್ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಸಿಬಿಐ ತಂಡವು ಬುಧವಾರ ಮಧ್ಯರಾತ್ರಿಯ ಸುಮಾರಿಗೆ ಸ್ವದೇಶಕ್ಕೆ ಮರಳಲಿದೆ.
ನ್ಯೂಯಾರ್ಕ್ ಪೂರ್ವ ಜಿಲ್ಲಾ ನ್ಯಾಯಾಲಯವು ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದಡಿ ಕಪೂರ್ ಹಸ್ತಾಂತರಕ್ಕೆ ಹಸಿರು ನಿಶಾನೆ ತೋರಿಸಿತ್ತು.
ತಾನು ಭಾರತಕ್ಕೆ ಮರಳಿದರೆ ಚಿತ್ರಹಿಂಸೆಯನ್ನು ಅನುಭವಿಸುವ ಸಾಧ್ಯತೆಯಿದೆ. ತನ್ನ ಹಸ್ತಾಂತರವು 1998ರ ವಿದೇಶಾಂಗ ವ್ಯವಹಾರಗಳ ಸುಧಾರಣೆ ಮತ್ತು ಮರುರಚನೆ ಕಾಯ್ದೆಯು ಜಾರಿಗೊಳಿಸಿರುವ ಚಿತ್ರಹಿಂಸೆ ವಿರುದ್ಧ ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲಂಘಿಸುತ್ತದೆ ಎಂಬ ಕಪೂರ್ ಪ್ರತಿಪಾದನೆಯನ್ನು ತಿರಸ್ಕರಿಸಿದ ವಿದೇಶಾಂಗ ಕಾರ್ಯದರ್ಶಿಗಳು ಶರಣಾಗತಿ ವಾರಂಟ್ ಹೊರಡಿಸಿದ್ದರು.
ಆಭರಣ ವ್ಯವಹಾರಕ್ಕಾಗಿ ತನ್ನಿಬ್ಬರು ಸೋದರರೊಂದಿಗೆ ಸೇರಿಕೊಂಡು ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿದ್ದ ಕಪೂರ್ ಅವುಗಳನ್ನು ಬಳಸಿಕೊಂಡು ಸುಂಕಮುಕ್ತ ಕಚ್ಚಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಭಾರತ ಸರಕಾರದಿಂದ ಪರವಾನಿಗೆಗಳನ್ನು ಪಡೆದಿದ್ದರು. ಇದರಿಂದ ಸರಕಾರದ ಬೊಕ್ಕಸಕ್ಕೆ 1.44 ಕೋಟಿ ರೂ.ಗಳ ನಷ್ಟವುಂಟಾಗಿತ್ತು ಎಂದು ಆರೋಪಿಸಲಾಗಿತ್ತು.
ವಂಚನೆ ಹೊರಬರುತ್ತಿದ್ದಂತೆ 1999ರಲ್ಲಿ ಕಪೂರ್ ಅಮೆರಿಕಕ್ಕೆ ಪರಾರಿಯಾಗಿದ್ದರು.







