16 ವರ್ಷಗಳಲ್ಲೇ ಮೊದಲ ಬಾರಿಗೆ ಅವಧಿಗೂ ಮುನ್ನ ಕೇರಳಕ್ಕೆ ಕಾಲಿಟ್ಟ ಮುಂಗಾರು

ಸಾಂದರ್ಭಿಕ ಚಿತ್ರ PC: x.com/FinancialXpress
ಹೊಸದಿಲ್ಲಿ: ನೈರುತ್ಯ ಮುಂಗಾರು ಶನಿವಾರ ಕೇರಳ ಪ್ರವೇಶಿಸಿದ್ದು, ವಾಡಿಕೆಯಂತೆ ಜೂನ್ 1ರ ವೇಳೆಗೆ ಆಗಮಿಸುವ ಮುಂಗಾರು ಮಾರುತ ಈ ಬಾರಿ ಒಂದು ವಾರ ಮುಂಚಿತವಾಗಿಯೇ ಕಾಲಿಟ್ಟಿದೆ. ಇದರೊಂದಿಗೆ ನಾಲ್ಕು ತಿಂಗಳ ಮಳೆಗಾಲ ಭಾರತದಲ್ಲಿ ಅಧಿಕೃತವಾಗಿ ಆರಂಭವಾಗಿದೆ. 2009ರಲ್ಲಿ ಮೇ 23ರಂದು ಮುಂಗಾರು ಆಗಮಿಸಿದ್ದು ಹೊರತುಪಡಿಸಿದರೆ ಆ ಬಳಿಕ ಇಷ್ಟು ಬೇಗ ಮುಂಗಾರು ಆಗಮಿಸಿರುವುದು ಇದೇ ಮೊದಲು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೇರಳದ ಜತೆಗೆ ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣ ಪರ್ಯಾಯ ದ್ವೀಪದ ಹಲವು ಕಡೆಗಳಲ್ಲಿ ಮತ್ತು ಮಿಜೋರಾಂನಲ್ಲಿ ಶನಿವಾರ ಏಕಕಾಲಕ್ಕೆ ಮುಂಗಾರು ಕಾಲಿಟ್ಟಿದೆ. ವಾಡಿಕೆಯಂತೆ ಜೂನ್ 5ರ ವೇಳೆಗೆ ಮುಂಗಾರು ಆರಂಭವಾಗುವ ಈ ಪ್ರದೇಶಗಳಲ್ಲಿ 12 ದಿನ ಮುಂಚಿತವಾಗಿ ಮುಂಗಾರು ಆಗಮನವಾಗಿದೆ.
ಮುಂಗಾರು ಮಳೆ ಕೇರಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಏಕಕಾಲಕ್ಕೆ ಆರಂಭವಾಗುವುದು ಅಸಹಜ ಪ್ರಕ್ರಿಯೆಯಾಗಿದ್ದು, ಸತತ ಎರಡನೇ ವರ್ಷವೂ ಈ ಬೆಳವಣಿಗೆ ನಡೆದಿದೆ. 2024ಕ್ಕೆ ಮುನ್ನ 2017ರ ಮೇ 30ರಂದು ಏಕಕಾಲಕ್ಕೆ ಮುಂಗಾರು ಆಗಮವಾಗಿತ್ತು.
ಸಾಮಾನ್ಯವಾಗಿ ನೈರುತ್ಯ ಮುಂಗಾರು ಕೇರಳದಲ್ಲಿ ಜೂನ್ 1ರಂದು ಆರಂಭವಾಗಿ ಜೂನ್ 5ರವೇಳೆಗೆ ಈಶಾನ್ಯದತ್ತ ಮುನ್ನಡೆಯುತ್ತದೆ. ತಮಿಳುನಾಡು ಮತ್ತು ಕರ್ನಾಟಕದ ಬಹತೇಕ ಭಾಗಗಳಲ್ಲಿ ಮೊದಲ ದಿನವೇ ಮಳೆ ಆರಂಭವಾಗುವುದು ಅಸಹಜ ಬೆಳವಣಿಗೆಯಲ್ಲ. ಆದರೆ ಮುಂದಿನ ದಿನಗಳಲ್ಲಿ ಅದು ವೇಗವಾಗಿ ಪ್ರಗತಿ ಹೊಂದುವುದರ ಸೂಚಕವಾಗಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.







