ಅವಧಿಗೆ ಮುನ್ನವೇ ಬಂಗಾಳ ಕೊಲ್ಲಿ ಪ್ರವೇಶಿಸಿದ ಮುಂಗಾರು: ಐಎಂಡಿ

PC : PTI
ಹೊಸದಿಲ್ಲಿ: ಈ ವರ್ಷದ ಮಂಗಾರು ಮಾರುತಗಳು ಅವಧಿಗೆ ಮುನ್ನವೇ ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಹಾಗೂ ಉತ್ತರ ಅಂಡಮಾನ್ ಸಮುದ್ರವನ್ನು ಮಂಗಳವಾರ ಪ್ರವೇಶಿಸಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ)ಪ್ರಕಟಿಸಿದೆ.
ಇದರಿಂದಾಗಿ ನಿಕೋಬಾರ್ ದ್ವೀಪಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ ಎಂದು ಅದು ತಿಳಿಸಿದೆ. ವಾಡಿಕೆಯಂತೆ ಮುಂಗಾರು ಜೂನ್ 1ರಂದು ಕೇರಳ ಪ್ರವೇಶಿಸುತ್ತದೆ. ಆದರೆ, ಈ ಬಾರಿ ಮುಂಚಿತವಾಗಿ ಮೇ 27ರಂದು ಕೇರಳ ತಲುಪುವ ನಿರೀಕ್ಷೆ ಇದೆ.
ಈ ಅವಧಿಯಲ್ಲಿ ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ನಿಕೋಬಾರ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಮೇಲೆ ಪಶ್ಚಿಮ ದಿಕ್ಕಿನ ಗಾಳಿಯ ತೀವ್ರತೆ ಹೆಚ್ಚಾಗಿದೆ. ಸಮುದ್ರ ಮಟ್ಟದಿಂದ 1.5 ಕಿ.ಮೀ. ಎತ್ತರದಲ್ಲಿ ಗಾಳಿಯ ವೇಗ 20 ಕ್ನಾಟ್ ಗಳನ್ನು ಮೀರಿದೆ. ಕೆಲವು ಪ್ರದೇಶಗಳಲ್ಲಿ 4.5 ಕಿ.ಮೀ. ವರೆಗೆ ವಿಸ್ತರಿಸಿದೆ ಎಂದು ಅದು ತಿಳಿಸಿದೆ.
ಮೋಡಗಳ ಬಗ್ಗೆ ಸೂಚನೆ ನೀಡುವ ಔಟ್ಗೋಯಿಂಗ್ ಲಾಂಗ್ವೇವ್ ರೇಡಿಯಷನ್ (ಒಎಲ್ಆರ್) ಕೂಡ ಈ ವಲಯದಲ್ಲಿ ಕಡಿಮೆ ಆಗಿದೆ. ಈ ಪರಿಸ್ಥಿತಿಯು ಈ ವಲಯದಲ್ಲಿ ಮುಂಗಾರು ಮಳೆಗೆ ಪೂರಕವಾಗಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.







