ಸಂಸತ್ತಿನ ಮುಂಗಾರು ಅಧಿವೇಶನ ಆರಂಭ: ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ್ ಕುರಿತ ಚರ್ಚೆಗೆ ಪ್ರತಿಪಕ್ಷಗಳ ಒತ್ತಾಯ

Photo credit: PTI
ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭಗೊಂಡಿತು. ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಘೋಷಣೆಗಳಿಂದ ಗದ್ದಲ ನಡೆಯಿತು.
ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್, ಹಾಗೂ ಯುದ್ಧ ವಿರಾಮದ ಕುರಿತು ಅಮೆರಿಕದ ಅಧ್ಯಕ್ಷರ ಹೇಳಿಕೆ ಕುರಿತು ತಕ್ಷಣದ ಚರ್ಚೆ ನಡೆಯಬೇಕೆಂದು ಆಗ್ರಹಿಸಿ ಪ್ರತಿಪಕ್ಷದ ಸಂಸದರು ಸದನದಲ್ಲಿ ಘೋಷಣೆಗಳನ್ನು ಕೂಗಿದರು.
ಪರಿಣಾಮವಾಗಿ ಲೋಕಸಭಾ ಕಲಾಪವನ್ನು ಕೇವಲ 20 ನಿಮಿಷಗಳ ನಂತರ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.
ವಿರೋಧ ಪಕ್ಷಗಳ ಘೋಷಣೆಗಳಿಗೆ ಪ್ರತಿಕ್ರಿಯಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, “ಸರ್ಕಾರ ಪ್ರತಿಯೊಂದು ವಿಷಯಕ್ಕೂ ಉತ್ತರಿಸಲು ಸಿದ್ಧವಾಗಿದೆ. ಆದರೆ ಸದನವು ನಿಯಮಗಳು ಹಾಗೂ ಪ್ರಕ್ರಿಯೆಗಳ ಅನ್ವಯವೇ ಕಾರ್ಯನಿರ್ವಹಿಸಬೇಕು. ಚರ್ಚೆಗೆ ಅವಕಾಶವಿದೆ, ಆದರೆ ಅದು ಶಿಸ್ತಿನಿಂದ ನಡೆಯಬೇಕು,” ಎಂದು ತಿಳಿಸಿದರು.
ಆಪರೇಷನ್ ಸಿಂಧೂರ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಆಗ್ರಹಿಸಿದರು. “ಪ್ರಧಾನಿಯವರು ಆಪರೇಷನ್ ಸಿಂಧೂರ್ ಅನ್ನು ‘ವಿಜಯ್ ಉತ್ಸವ’ ಎಂದು ವರ್ಣಿಸಿರುವ ಹಿನ್ನೆಲೆಯಲ್ಲಿ, ಇದರ ಬಗ್ಗೆ ಸಮಗ್ರ ಚರ್ಚೆ ಅಗತ್ಯ. ಇದು ರಾಷ್ಟ್ರಸುರಕ್ಷೆಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ,” ಎಂದು ಅವರು ಹೇಳಿದರು.
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಹಲ್ಗಾಮ್ ದಾಳಿ ಮತ್ತು ಟ್ರಂಪ್ ಅವರ ಯುದ್ಧ ವಿರಾಮದ ಹೇಳಿಕೆಯನ್ನು ಉಲ್ಲೇಖಿಸಿ, “ಇಂತಹ ಸಮಯದಲ್ಲಿ ಸರ್ಕಾರವು ಸ್ಪಷ್ಟನೆ ನೀಡಬೇಕು. ಚರ್ಚೆ ನಡೆಯಬೇಕು,” ಎಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಜೆ.ಪಿ. ನಡ್ಡಾ, “ಆಪರೇಷನ್ ಸಿಂಧೂರ್ ಕುರಿತು ಸಂಪೂರ್ಣ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ. ಯಾವುದೇ ವಿಷಯವನ್ನು ಮರೆಮಾಚುವ ಉದ್ದೇಶ ನಮ್ಮದು ಅಲ್ಲ,” ಎಂದು ಭರವಸೆ ನೀಡಿದರು.







