ಮಹಿಳೆಯರಿಗೆ ಮಾಸಿಕ 2,500 ರೂ. ; ದಿಲ್ಲಿ ಸಚಿವ ಸಂಪುಟ ಅನುಮೋದನೆ

ರೇಖಾ ಗುಪ್ತ | PTI
ಹೊಸದಿಲ್ಲಿ: ಮಹಿಳೆಯರಿಗೆ ತಿಂಗಳಿಗೆ 2,500 ರೂ. ಕೊಡುವ ‘ಮಹಿಳಾ ಸಮೃದ್ಧಿ ಯೋಜನೆ’ಗೆ ದಿಲ್ಲಿ ಸರಕಾರ ಶನಿವಾರ ಅನುಮೋದನೆ ನೀಡಿದೆ.
‘‘ಇಂದು ಅಂತರರಾಷ್ಟ್ರೀಯ ಮಹಿಳಾ ದಿನ. ನಾವು ಇಂದು ಸಚಿವ ಸಂಪುಟ ಸಭೆ ನಡೆಸಿ ಮಹಿಳಾ ಸಮೃದ್ಧಿ ಯೋಜನೆಗೆ ಅಂಗೀಕಾರ ನೀಡಿದ್ದೇವೆ. ಮಹಿಳೆಯರಿಗೆ ತಿಂಗಳಿಗೆ 2,500 ರೂ. ನೀಡುವುದಾಗಿ ದಿಲ್ಲಿ ಚುನಾವಣೆಯ ವೇಳೆ ನಾವು ನೀಡಿರುವ ಭರವಸೆಯನ್ನು ಇದರೊಂದಿಗೆ ಈಡೇರಿಸಿದ್ದೇವೆ’’ ಎಂದು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಘೋಷಿಸಿದರು.
‘‘ಯೋಜನೆಯ ಜಾರಿಗಾಗಿ ನಾವು ದಿಲ್ಲಿ ಬಜೆಟ್ನಲ್ಲಿ 5,100 ಕೋಟಿ ರೂ. ಒದಗಿಸಿದ್ದೇವೆ. ನನ್ನ ಅಧ್ಯಕ್ಷತೆಯಲ್ಲಿ ನಾವೊಂದು ಸಮಿತಿಯೊಂದನ್ನೂ ರಚಿಸಿದ್ದೇವೆ. ಯೋಜನೆಗೆ ಹೆಸರು ನೋಂದಣಿ ಶೀಘ್ರವೇ ಆರಂಭಗೊಳ್ಳಲಿದೆ. ಈ ಉದ್ದೇಶಕ್ಕಾಗಿ ಶೀಘ್ರವೇ ವೆಬ್ಸೈಟೊಂದನ್ನು ಆರಂಭಿಸಲಾಗುವುದು’’ ಎಂದು ಅವರು ತಿಳಿಸಿದರು.
ದಿಲ್ಲಿ ವಿಧಾನಸಭಾ ಚುನಾವಣೆಗಾಗಿ ಹೊರಡಿಸಿದ ತನ್ನ ಸಂಕಲ್ಪಪತ್ರದಲ್ಲಿ, ಮಹಿಳೆಯರಿಗೆ ತಿಂಗಳಿಗೆ 2,500 ರೂ. ಕೊಡುವುದಾಗಿ ಬಿಜೆಪಿಯು ಭರವಸೆ ನೀಡಿತ್ತು. ಆಮ್ ಆದ್ಮಿ ಪಕ್ಷವು ತಿಂಗಳಿಗೆ 2,100 ರೂ. ಕೊಡುವುದಾಗಿ ಘೋಷಿಸಿತ್ತು.
‘‘ಮಹಿಳಾ ಸಮೃದ್ಧಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಅದರ ವೆಬ್ಸೈಟ್ಗೆ ಚಾಲನೆ ಸಿಕ್ಕಿದ ಕೂಡಲೇ ಮಹಿಳೆಯರು ಅದರಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಅದರ ಶರತ್ತುಗಳು ಮತ್ತು ಮಾನದಂಡಗಳ ಕುರಿತ ಎಲ್ಲಾ ವಿವರಗಳನ್ನು ನೀಡಲಾಗುವುದು. ಮಾನದಂಡಗಳು ಮತ್ತು ಶರತ್ತುಗಳನ್ನು ರೂಪಿಸಲು ಕಪಿಲ್ ಮಿಶ್ರಾ, ಆಶಿಶ್ ಸೂದ್ ಮತ್ತು ಪರ್ವೇಶ್ ವರ್ಮಾ ಅವರನ್ನೊಳಗೊಂಡ ಮೂವರು ಸಚಿವರ ಸಮಿತಿಯೊಂದನ್ನು ರಚಿಸಲಾಗಿದೆ. ನಾನು ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ’’ ಎಂದು ದಿಲ್ಲಿ ಸಚಿವ ಮಂಜಿಂದರ್ ಸಿಂಗ್ ಸೀರ್ಸ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.







