ಉತ್ತರ ಪ್ರದೇಶ | ಮದುವೆ ಬ್ಯಾಂಡ್ ಗಳಿಗೆ ಹಿಂದು ದೇವತೆಗಳ ಹೆಸರು ಬೇಡ: ಮೊರಾದಾಬಾದ್ ಪೊಲೀಸರಿಂದ ಮುಸ್ಲಿಮರಿಗೆ ಆದೇಶ

ಸಾಂದರ್ಭಿಕ ಚಿತ್ರ
ಲಕ್ನೋ,ಆ.21: ಮುಖ್ಯಮಂತ್ರಿಗಳ ಪೋರ್ಟಲ್ ನಲ್ಲಿ ದೂರು ದಾಖಲಾದ ಬಳಿಕ ಉತ್ತರ ಪ್ರದೇಶದ ಮೊರಾದಾಬಾದ್ ಪೋಲಿಸರು ತಮ್ಮ ಬ್ಯಾಂಡ್ ಗಳಿಗೆ ಹಿಂದು ದೇವತೆಗಳ ಹೆಸರನ್ನಿಡದಂತೆ ಮುಸ್ಲಿಮ್ ಮದುವೆ ಬ್ಯಾಂಡ್ ಗಳ ನಿರ್ವಾಹಕರಿಗೆ ಆದೇಶಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ಗುರುವಾರ ವರದಿ ಮಾಡಿದೆ.
ವಕೀಲ ಶಾಬಿ ಶರ್ಮಾ ಜು.9ರಂದು ದಾಖಲಿಸಿರುವ ದೂರಿನಲ್ಲಿ, ಮೊರಾದಾಬಾದ್ ಜಿಲ್ಲೆಯಲ್ಲಿ ಸುಮಾರು 15ರಿಂದ 20 ಮುಸ್ಲಿಮ್ ಬ್ಯಾಂಡ್ ನಿರ್ವಾಹಕರು ಹಿಂದು ದೇವತೆಗಳ ಹೆಸರುಗಳನ್ನು ಬಳಸಿಕೊಂಡು ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮಂಗಳವಾರ ಜಿಲ್ಲೆಯ ಹಲವಾರು ಬ್ಯಾಂಡ್ ನಿರ್ವಾಹರನ್ನು ಕರೆಸಿ ಇಂತಹ ಹೆಸರುಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದ್ದು,ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ(ನಗರ) ಕುಮಾರ್ ರಣವಿಜಯ ಸಿಂಗ್ ಅವರು ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ಮೊರಾದಾಬಾದ್ ನಲ್ಲಿ ಮದುವೆ ಬ್ಯಾಂಡ್ ಉದ್ಯಮದಲ್ಲಿ ಮುಸ್ಲಿಮರು ಪ್ರಾಬಲ್ಯ ಹೊಂದಿದ್ದಾರೆ. ಆದರೂ ಹೆಚ್ಚಿನವರು ದೇವರು ಮತ್ತು ದೇವಿಯರು ಸೇರಿದಂತೆ ಹಿಂದು ಹೆಸರುಗಳನ್ನು ಬಳಸುತ್ತಿದ್ದಾರೆ. ಇದು ಗುರುತನ್ನು ತಿರುಚುವ ಪ್ರಯತ್ನವಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಆರೋಪಿಸಿದ ದೂರುದಾರ ಶರ್ಮಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ಇದರ ವಿರುದ್ಧ ಕ್ರಮಕ್ಕೆ ಕರೆ ನೀಡಿದ್ದಾರೆ. ತನ್ನ ದೂರನ್ನು ಆಧರಿಸಿ ಪೋಲಿಸರು ತೆಗೆದುಕೊಂಡಿರುವ ಕ್ರಮವು ತಾರತಮ್ಯವಲ್ಲ,ಅದು ಕಾನೂನು ಕ್ರಮವಾಗಿದೆ ಎಂದು ಹೇಳಿದರು.







