ಮಧ್ಯಪ್ರದೇಶ | ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ 23,000ಕ್ಕೂ ಹೆಚ್ಚು ಮಹಿಳೆಯರು, ಬಾಲಕಿಯರ ನಾಪತ್ತೆ!

ಸಾಂದರ್ಭಿಕ ಚಿತ್ರ
ಭೋಪಾಲ್: ಮಧ್ಯಪ್ರದೇಶದಲ್ಲಿ ಕನಿಷ್ಠ ಒಂದು ತಿಂಗಳಿನಿಂದ ಒಂದೂವರೆ ವರ್ಷದವರೆಗೆ 23,000ಕ್ಕೂ ಹೆಚ್ಚು ಮಹಿಳೆಯರು ಹಾಗೂ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಮಧ್ಯಪ್ರದೇಶ ಸರಕಾರ ಮಾಹಿತಿ ಹಂಚಿಕೊಂಡಿದೆ.
ರಾಜ್ಯ ವಿಧಾನಸಭಾ ಮಾನ್ಸೂನ್ ಅಧಿವೇಶನದಲ್ಲಿ ಮಾಜಿ ಗೃಹ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಬಾಲಾ ಬಚ್ಚನ್ ಅವರು ಕೇಳಿದ ಪ್ರಶ್ನೆಗೆ ರಾಜ್ಯ ಸರಕಾರ ಮೇಲಿನಂತೆ ಮಾಹಿತಿ ನೀಡಿದೆ.
ಮಾಜಿ ಗೃಹ ಸಚಿವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ರಾಜ್ಯ ಸರಕಾರ, ಜೂನ್ 30, 2025ರ ದತ್ತಾಂಶದಂತೆ, ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 21,000ಕ್ಕೂ ಹೆಚ್ಚು ಮಹಿಳೆಯರು ಹಾಗೂ 1900ಕ್ಕೂ ಹೆಚ್ಚು ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.
ಅಚ್ಚರಿಯ ಸಂಗತಿಯೆಂದರೆ, ರಾಜ್ಯ ಸರಕಾರ ಬಹಿರಂಗಪಡಿಸಿರುವ ಈ ಅಂಕಿ-ಸಂಖ್ಯೆಯಲ್ಲಿ 2024ರ ಜನವರಿಯಿಂದ ಡಿಸೆಂಬರ್ ವರೆಗೆ ಹಾಗೂ 2025ರ ಜನವರಿಯಿಂದ ಜೂನ್ ವರೆಗಿನ ಅಂಕಿ-ಅಂಶಗಳೂ ಸೇರಿವೆ.
ಈ ದತ್ತಾಂಶದ ವಿಸ್ತೃತ ವಿಂಗಡನೆಯನುಸಾರ, ರಾಜ್ಯದ ಸುಮಾರು 30 ಜಿಲ್ಲೆಗಳಲ್ಲಿ ಒಟ್ಟು ನಾಪತ್ತೆಯಾಗಿದ್ದ ಮಹಿಳೆಯರ ಸಂಖ್ಯೆ ತಲಾ 500ಕ್ಕಿಂತ ಹೆಚ್ಚಿರುವುದು ರಾಜ್ಯ ಸರಕಾರ ಬಹಿರಂಗಪಡಿಸಿರುವ ಅಂಕಿ-ಸಂಖ್ಯೆಯಿಂದ ಬೆಳಕಿಗೆ ಬಂದಿದೆ.
ಈ ಜಿಲ್ಲೆಗಳ ಪೈಕಿ ರಾಜ್ಯದ ರಾಜಕೀಯ ಹಾಗೂ ಆಡಳಿತಾತ್ಮಕ ರಾಜಧಾನಿ ಭೋಪಾಲ್, ವಾಣಿಜ್ಯ ರಾಜಧಾನಿ ಇಂದೋರ್, ಸಾಂಸ್ಕೃತಿಕ ಮತ್ತು ನ್ಯಾಯಾಂಗ ರಾಜಧಾನಿ ಜಬಲ್ಪುರ್, ಸಾಗರ್, ಗ್ವಾಲಿಯರ್, ಛತ್ತರ್ ಪುರ್, ಧಾರ್ ಹಾಗೂ ರೇವಾ ಜಿಲ್ಲೆಗಳು ಸೇರಿವೆ.
ಒಂದು ತಿಂಗಳಿಗಿಂತ ಹೆಚ್ಚು ಅವಧಿಗೆ ಬಾಲಕಿಯರು ನಾಪತ್ತೆಯಾಗಿರುವ ಇನ್ನಿತರ ಜಿಲ್ಲೆಗಳ ಪೈಕಿ ಗ್ವಾಲಿಯರ್-ಚಂಬಲ್ ಪ್ರಾಂತ್ಯದ ಶಿವಪುರಿ ಮತ್ತು ಗುನಾ ಜಿಲ್ಲೆಗಳು, ನೈರುತ್ಯ ಮಧ್ಯಪ್ರದೇಶದ ಖಾರ್ಗೋನೆ, ಖಾಂಡ್ವಾ ಮತ್ತು ಬರ್ವಾನಿ ಜಿಲ್ಲೆಗಳು, ಮುಖ್ಯಮಂತ್ರಿ ಮೋಹನ್ ಯಾದವ್ ರ ತವರು ಜಿಲ್ಲೆಯಾದ ಉಜ್ಜಯಿನಿ, ಮಂಡಸೌರ್, ರತ್ಲಂ, ನೀಮುಚ್ ಹಾಗೂ ಪಶ್ಚಿಮ ಮಧ್ಯಪ್ರದೇಶದ ಝಬುವಾ ಮತ್ತು ಧಾರ್ ಜಿಲ್ಲೆಗಳು ಸೇರಿವೆ.
ಇದರೊಂದಿಗೆ ಆದಿವಾಸಿ ಪ್ರಾಬಲ್ಯದ ಮಹಾಕೋಶಲ್ ಪ್ರಾಂತ್ಯದ ಕತ್ನಿ, ಬಾಲಾಘಾಟ್, ಸಿಯೋನಿ ಮತ್ತು ಮಾಂಡ್ಲಾ ಜಿಲ್ಲೆಗಳು, ಕೇಂದ್ರ ಮಧ್ಯಾಪ್ರದೇಶದ ರೈಸೆನ್, ವಿದಿಶಾ ಹಾಗೂ ನರ್ಮದಾಪುರಂ ಜಿಲ್ಲೆಗಳಲ್ಲದೆ, ವಿಂಧ್ಯಾ ಪ್ರಾಂತ್ಯದ ಸತ್ನಾ ಮತ್ತು ರೇವಾ ಜಿಲ್ಲೆಗಳು ಹಾಗೂ ಬುಂದೇಲ್ ಖಂಡ್ ಪ್ರಾಂತ್ಯದ ದಾಮೋಹ್, ಸಾಗರ್ ಮತ್ತು ನರಸಿಂಗ್ ಪುರ್ ಜಿಲ್ಲೆಗಳೂ ಸೇರಿವೆ.
ರಾಜ್ಯ ಸರಕಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯಗಳನ್ನೆಸಗಿದ ವಿವಿಧ ಪ್ರಕರಣಗಳಲ್ಲಿನ ಆರೋಪಿಗಳಲ್ಲದೆ, ಬಾಲಕಿಯರ ಅಪಹರಣ ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರನ್ನು ರಾಜ್ಯ ಪೊಲೀಸರು ಇನ್ನೂ ಪತ್ತೆ ಹಚ್ಚಬೇಕಿದೆ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ಹೀಗೆ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ, ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವವರೂ ಸೇರಿದ್ದಾರೆ.
ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ 292 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದರೆ, ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ/ಅತ್ಯಾಚಾರವೆಸಗಿದ ಪ್ರಕರಣಗಳನ್ನು ಎದುರಿಸುತ್ತಿರುವ 283 ಮಂದಿ ಆರೋಪಿಗಳೂ ಪರಾರಿಯಾಗಿದ್ದಾರೆ ಎಂಬ ಸಂಗತಿಯೂ ಈ ಮಾಹಿತಿಯಿಂದ ಬೆಳಕಿಗೆ ಬಂದಿದೆ.
ಮಹಿಳೆಯರ ಮೇಲೆ ಲೈಂಗಿಕ ಅಪರಾಧಗಳನ್ನೆಸಗಿದ ಪ್ರಕರಣಗಳನ್ನು ಎದುರಿಸುತ್ತಿರುವ ಇನ್ನಿತರ 443 ಮಂದಿ ಆರೋಪಿಗಳೂ ಕೂಡಾ ತಲೆ ಮರೆಸಿಕೊಂಡಿದ್ದಾರೆ. ಇದರೊಂದಿಗೆ, ಇಂತಹುದೇ ಬಾಲಕಿಯರ ಮೇಲೆ ಲೈಂಗಿಕ ಅಪರಾಧಗಳನ್ನೆಸಗಿದ ಪ್ರಕರಣಗಳನ್ನೆದುರಿಸುತ್ತಿರುವ ಆರೋಪಿಗಳೂ ಇದುವರೆಗೆ ಪತ್ತೆಯಾಗಿಲ್ಲ ಎಂಬ ಮಾಹಿತಿಯೂ ಬಯಲಾಗಿದೆ.
ಸೌಜನ್ಯ: indianexpress.com







