50ಕ್ಕೂ ಅಧಿಕ ಕೆಮ್ಮಿನ ಸಿರಪ್ ತಯಾರಕರು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ

ಹೊಸದಿಲ್ಲಿ, ಡಿ.4: ದೇಶದಲ್ಲಿ ಕೆಮ್ಮಿನ ಸಿರಪ್‌ಗಳನ್ನು ತಯಾರಿಸುತ್ತಿರುವ 50ಕ್ಕೂ ಅಧಿಕ ಕಂಪನಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಎಂದು ಸರಕಾರಿ ವರದಿಯೊಂದು ಹೇಳಿದೆ. ಭಾರತದಲ್ಲಿ ತಯಾರಾದ ಕೆಮ್ಮಿನ ಸಿರಪ್‌ಗಳಿಗೂ ವಿಶ್ವಾದ್ಯಂತ 141 ಮಕ್ಕಳ ಸಾವಿಗೂ ತಳುಕು ಹಾಕಿದ ವರದಿಗಳ ಬಳಿಕ ವಿವಿಧ ರಾಜ್ಯಗಳಲ್ಲಿ ನಡೆಸಲಾದ ಪ್ರಯೋಗಾಲಯ ಪರೀಕ್ಷೆಗಳನ್ನು ವರದಿಯು ಉಲ್ಲೇಖಿಸಿದೆ ಎಂದು The Economic Times ವರದಿ ಮಾಡಿದೆ.
ಅಕ್ಟೋಬರ್‌ವರೆಗೆ ಬಿಡುಗಡೆಗೊಳಿಸಲಾದ 2,104 ಪರೀಕ್ಷಾ ವರದಿಗಳ ಪೈಕಿ 54 ಕಂಪನಿಗಳಿಗೆ ಸಂಬಂಧಿಸಿದ 126 (ಶೇ.6) ವರದಿಗಳು ಪ್ರಮಾಣಿತ ಗುಣಮಟ್ಟಕ್ಕೆ ಅನುಗುಣವಾಗಿರಲಿಲ್ಲ ಎಂದು ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ)ಯ ವರದಿಯು ತಿಳಿಸಿದೆ.
ವರದಿಯು ಕೆಮ್ಮಿನ ಸಿರಪ್‌ಗಳು ಕಳಪೆ ಗುಣಮಟ್ಟದ್ದಾಗಿರುವ ನಿರ್ದಿಷ್ಟ ಪ್ರಕರಣಗಳನ್ನು ಬೆಟ್ಟು ಮಾಡಿದೆ.
ಉದಾಹರಣೆಗೆ ಗುಜರಾತಿನ ಆಹಾರ ಮತ್ತು ಔಷಧಿ ಪ್ರಯೋಗಶಾಲೆಯು ಅಕ್ಟೋಬರ್‌ವರೆಗೆ 385 ಸ್ಯಾಂಪಲ್‌ಗಳನ್ನು ವಿಶ್ಲೇಷಿಸಿದ್ದು,ಈ ಪೈಕಿ 20 ಕಂಪನಿಗಳ 51 ಕೆಮ್ಮಿನ್ ಸಿರಪ್‌ಗಳು ಪ್ರಮಾಣಿತ ಗುಣಮಟ್ಟದ್ದಾಗಿರಲಿಲ್ಲ. ಇದೇ ರೀತಿ ಮುಂಬೈನ ಕೇಂದ್ರೀಯ ಔಷಧಿ ಪರೀಕ್ಷಾ ಪ್ರಯೋಗಾಲಯವು 523 ಸ್ಯಾಂಪಲ್‌ಗಳನ್ನು ವಿಶ್ಲೇಷಿಸಿದ್ದು,ಈ ಪೈಕಿ 10 ಕಂಪನಿಗಳ 18 ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ. ಚಂಡಿಗಡದ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯವು 284 ಪರೀಕ್ಷಾ ವರದಿಗಳನ್ನು ಬಿಡುಗಡೆಗೊಳಿಸಿದ್ದು,10 ಕಂಪನಿಗಳ 23 ಸ್ಯಾಂಪಲ್‌ಗಳು ಪ್ರಮಾಣಿತ ಗುಣಮಟ್ಟದ್ದಾಗಿರಲಿಲ್ಲ. ಗಾಝಿಯಾಬಾದ್‌ನ ಇಂಡಿಯನ್ ಫಾರ್ಮಾಕೋಪಿಯಾ ಕಮಿಷನ್ 502 ವರದಿಗಳನ್ನು ಬಿಡುಗಡೆಗೊಳಿಸಿದ್ದು ಒಂಭತ್ತು ಕಂಪನಿಗಳ 29 ಸ್ಯಾಂಪಲ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ.
ಗಾಂಬಿಯಾದಲ್ಲಿ ಮೂತ್ರಪಿಂಡ ವೈಫಲ್ಯದಿಂದಾಗಿ ಸಂಭವಿಸಿದ್ದ 70 ಮಕ್ಕಳ ಸಾವುಗಳಿಗೂ ಭಾರತೀಯ ಕಂಪನಿ ಮೇಡನ್ ಫಾರ್ಮಾಸ್ಯೂಟಿಕಲ್ಸ್ ಲಿ. ತಯಾರಿಸಿದ್ದ ಕೆಮ್ಮು ಮತ್ತು ಶೀತದ ಸಿರಪ್‌ಗಳಿಗೂ ನಂಟು ಕಲ್ಪಿಸಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹೇಳಿದ ಬಳಿಕ ಭಾರತದಲ್ಲಿ ಉತ್ಪಾದಿತ ಕೆಮ್ಮಿನ ಸಿರಪ್‌ಗಳು ನಿಗಾದಲ್ಲಿವೆ.
ಈ ವರ್ಷದ ಮೇ ತಿಂಗಳಿನಲ್ಲಿ ಭಾರತದ ಔಷಧಿಗಳ ಮಹಾನಿಯಂತ್ರಕ (ಡಿಜಿಸಿಐ)ರ ಕಚೇರಿಯು,ರಫ್ತು ಉದ್ದೇಶಕ್ಕಾಗಿ ಕೆಮ್ಮಿನ ಸಿರಪ್ ತಯಾರಕರಿಂದ ಸ್ವೀಕರಿಸಿದ ಸ್ಯಾಂಪಲ್‌ಗಳನ್ನು ಹೆಚ್ಚಿನ ಆದ್ಯತೆಯಲ್ಲಿ ವಿಶ್ಲೇಷಿಸುವಂತೆ ಮತ್ತು ಸಾಧ್ಯವಾದಷ್ಟು ಶೀಘ್ರ ಪರೀಕ್ಷಾ ವರದಿಗಳನ್ನು ಸಲ್ಲಿಸುವಂತೆ ಆಯಾ ರಾಜ್ಯ ಸರಕಾರದ ಸ್ವಾಮ್ಯದ ಎನ್‌ಎಬಿಎಲ್ ಮಾನ್ಯತೆ ಹೊಂದಿರುವ ಪ್ರಯೋಗಾಲಯಗಳಿಗೆ ನಿರ್ದೇಶಿಸುವಂತೆ ರಾಜ್ಯಗಳ ಔಷಧಿಗಳ ನಿಯಂತ್ರಕರಿಗೆ ಸೂಚನೆ ನೀಡಿತ್ತು.
ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯವೂ ಜೂ.1ರಿಂದ ಕೆಮ್ಮಿನ ಸಿರಪ್‌ಗಳ ರಫ್ತುದಾರರು ಅವುಗಳನ್ನು ರಫ್ತು ಮಾಡುವ ಮೊದಲು ಸರಕಾರಿ ಪ್ರಯೋಗಶಾಲೆಗಳಲ್ಲಿ ಪರೀಕ್ಷೆಗೊಳಪಡಿಸುವುದನ್ನು ಮತ್ತು ವಿಶ್ಲೇಷಣಾ ಪ್ರಮಾಣ ಪತ್ರವನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿತ್ತು.
ಕಳೆದ ವಾರ ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಮಿಥೈಲ್ ಅಲ್ಕೋಹಾಲ್‌ನ್ನು ಒಳಗೊಂಡಿದ್ದ ಆಯುರ್ವೇದ ಸಿರಪ್‌ನ್ನು ಸೇವಿಸಿದ ಬಳಿಕ ಐವರು ಮೃತಪಟ್ಟು,ಇಬ್ಬರು ಅಸ್ವಸ್ಥಗೊಂಡಿದ್ದರು.







