ನೆರೆ ನೀರಿನಲ್ಲಿ ಪತ್ತೆಯಾದ ಮೋರ್ಟರ್ ಶೆಲ್ ಸ್ಫೋಟ; ಇಬ್ಬರು ಸಾವು, ನಾಲ್ವರಿಗೆ ಗಾಯ

ಕೋಲ್ಕತಾ : ಪಶ್ಚಿಮಬಂಗಾಳದ ಜಲಪಾಗುರಿ ಜಿಲ್ಲೆಯಲ್ಲಿ ತೀಸ್ತಾ ನದಿ ಪ್ರವಾಹದಲ್ಲಿ ಪತ್ತೆಯಾದ ಮೋರ್ಟರ್ ಶೆಲ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಈ ಮೋರ್ಟರ್ ಶೆಲ್ ಸೇನೆಗೆ ಸೇರಿರುವ ಸಾಧ್ಯತೆ ಇದೆ. ಸಿಕ್ಕಿಂನಲ್ಲಿ ಬುಧವಾರ ಮೇಘ ಸ್ಫೋಟ ಹಾಗೂ ದಿಢೀರ್ ಪ್ರವಾಹ ಸಂಭವಿಸಿತ್ತು. ಇದರಿಂದ ಬೆಟ್ಟದಿಂದ ಇಳಿದ ನೀರಿನಲ್ಲಿ ಈ ಮೋರ್ಟರ್ ಶೆಲ್ ಇದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕ್ರಾಂತಿ ಬ್ಲಾಕ್ ನ ಚಂಪಡಾಂಗ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ವ್ಯಕ್ತಿಯೋರ್ವ ನೆರೆ ನೀರಲ್ಲಿ ಸಿಕ್ಕಿದ ಮೋರ್ಟರ್ ಶೆಲ್ ಅನ್ನು ಮನೆಗೆ ಕೊಂಡೊಯ್ದು ಗುಜಿರಿಗೆ ಮಾರಾಟ ಮಾಡಲು ಒಡೆದಾಗ ಸ್ಫೋಟ ಸಂಭವಿಸಿತು. ಇದರಿಂದ ಇಬ್ಬರು ಸಾವನ್ನಪ್ಪಿದರು ಹಾಗೂ ನಾಲ್ವರು ಗಾಯಗೊಂಡರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
‘‘ಗಾಯಗೊಂಡ ನಾಲ್ವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೂಲಂಕಷ ತನಿಖೆ ಆರಂಭಿಸಲಾಗಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘‘ಗಾಯಗೊಂಡವರಲ್ಲಿ ಕನಿಷ್ಠ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ’’ ಎಂದು ಅವರು ಹೇಳಿದ್ದಾರೆ. ಈ ನಡುವೆ ಜಲಪಾಗುರಿ ಪೊಲೀಸರು, ನದಿ ನೀರಲ್ಲಿ ತೇಲಿ ಬರುವ ಆಯುಧ ಅಥವಾ ಸ್ಫೋಟಕಗಳನ್ನು ಹೆಕ್ಕಿಕೊಳ್ಳದಂತೆ ಜನರನ್ನು ಆಗ್ರಹಿಸಿ ಸಲಹೆ ನೀಡಿದ್ದಾರೆ.







