ಬಿಹಾರ| ‘ಪರ್ವತ ಮನುಷ್ಯ’ ದಶರಥ್ ಮಾಂಝಿಯ ಪುತ್ರನಿಗೆ ಟಿಕೆಟ್ ನಿರಾಕರಣೆ; ರಾಹುಲ್ ಗಾಂಧಿ ವಿರುದ್ಧ ಭಾಗೀರಥ್ ಮಾಂಝಿ ಆಕ್ರೋಶ

ರಾಹುಲ್ ಗಾಂಧಿ ಹಾಗೂ ಭಾಗೀರಥ್ ಮಾಂಝಿ (Photo credit: jagran.com)
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡದ ಹಿನ್ನೆಲೆಯಲ್ಲಿ, ಪ್ರಸಿದ್ಧ ʼಪರ್ವತ ಮನುಷ್ಯʼ ದಶರಥ್ ಮಾಂಝಿಯ ಪುತ್ರ ಭಾಗೀರಥ್ ಮಾಂಝಿ ಅವರು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಟಿಕೆಟ್ ನೀಡುವ ಭರವಸೆ ನೀಡಿದ್ದರೂ ಕೊನೆಯ ಕ್ಷಣದಲ್ಲಿ ನಿರಾಕರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಭಾಗೀರಥ್ ಮಾಂಝಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ನಾಲ್ಕು ದಿನಗಳ ಕಾಲ ದಿಲ್ಲಿಯಲ್ಲಿದ್ದು ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೆ. ಅವರು ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ನಾನು ಬರಾಚಟಿ ಅಥವಾ ಬೋಧ್ ಗಯಾ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡಿದ್ದೆ, ಆದರೆ ನನ್ನ ಅರ್ಜಿಯನ್ನು ನಿರ್ಲಕ್ಷಿಸಲಾಗಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಯಾದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಗೆಹ್ಲೌರ್ ಗ್ರಾಮದಲ್ಲಿನ ದಶರಥ್ ಮಾಂಝಿ ಸ್ಮಾರಕಕ್ಕೆ ಈ ವರ್ಷದ ಜೂನ್ ನಲ್ಲಿ ರಾಹುಲ್ ಗಾಂಧಿಯವರು ಭೇಟಿ ನೀಡಿ, ‘ಪರ್ವತ ಮನುಷ್ಯ’ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದರು. ಬೆಟ್ಟ ಕತ್ತರಿಸಿ ರಸ್ತೆ ನಿರ್ಮಿಸಿ ಜನಜೀವನ ಸುಲಭಗೊಳಿಸಿದ ಮಾಂಝಿಯವರ ಸೇವೆಯನ್ನು ಅವರು ಶ್ಲಾಘಿಸಿದ್ದರು. ಇದೇ ಸಂದರ್ಭದಲ್ಲಿ ಅವರ ಕುಟುಂಬವನ್ನು ಭೇಟಿಯಾಗಿ ಮನೆ ನಿರ್ಮಾಣದ ಭರವಸೆ ನೀಡಿದ್ದರು.
ಕಳೆದ ಫೆಬ್ರವರಿಯಲ್ಲಿ ಭಾಗೀರಥ್ ಮಾಂಝಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದರು. ಪಕ್ಷ ಸೇರುವಾಗಲೇ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು.
“ಭಾಗೀರಥ್ ಮಾಂಝಿಗೆ ಟಿಕೆಟ್ ನೀಡುವುದಾಗಿ ಹೇಳಿ ಕೊನೆಯಲ್ಲಿ ನಿರಾಕರಿಸಿರುವುದು ಕಾಂಗ್ರೆಸ್ ಪಕ್ಷದ ಹಾಗೂ ವಿಶೇಷವಾಗಿ ರಾಹುಲ್ ಗಾಂಧಿಯವರ ದಲಿತ ವಿರೋಧಿ ನಿಲುವಿನ ಸ್ಪಷ್ಟ ಉದಾಹರಣೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ನ ಮುಖವಾಡ ಮತ್ತೊಮ್ಮೆ ಬಯಲಾಗಿದೆ,” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.







