ಮಧ್ಯಪ್ರದೇಶ | ಉಜ್ಜಯಿನಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ : ಇಬ್ಬರ ಬಂಧನ
ಸಿಎಂ ತವರು ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಅಪರಾಧ ; ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ಸಾಂದರ್ಭಿಕ ಚಿತ್ರ
ಉಜ್ಜಯಿನಿ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 16 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರದ ಘಟನೆ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯು ವಿವಾಹ ಸಮಾರಂಭವೊಂದರಲ್ಲಿ ಪ್ರಮುಖ ಆರೋಪಿಯ ಸಂಪರ್ಕಕ್ಕೆ ಬಂದಿದ್ದಳು. ಕಳೆದ ಐದು ತಿಂಗಳಿನಿಂದ ಫೋನ್ ಮೂಲಕ ಆತನೊಂದಿಗೆ ಸಂಪರ್ಕದಲ್ಲಿದ್ದ ಆಕೆ, ಎರಡು ಮೂರು ಬಾರಿ ಆತನನ್ನು ಭೇಟಿಯಾಗಿದ್ದಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಶುಕ್ರವಾರ ಆಕೆಯನ್ನು ಆರೋಪಿ ಕರೆದಾಗ, ಆಕೆ ಆತನ ಕಾರಿನಲ್ಲಿ ತೆರಳಿದ್ದಾಳೆ. ನಂತರ, ಆತ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಎಂದು ಆಕೆ ನಮಗೆ ತಿಳಿಸಿದ್ದಾಳೆ. ಆತ ಹಾಗೂ ಆತನ ಇಬ್ಬರು ಸಹಚರರ ಪೈಕಿ ಓರ್ವ ಸಹಚರನನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವೇಳೆ ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ನ್ಯಾಯಾಲಯದಲ್ಲಿ ಆಕೆ ಹೇಳಿಕೆ ದಾಖಲಿಸಿದ ನಂತರ, ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.
ಇದರ ಬೆನ್ನಿಗೇ, ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಘಟಕ, “ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಬರ್ಬರ ಸಾಮೂಹಿಕ ಅತ್ಯಾಚಾರ ನಡೆದಿದೆ. ಆರೋಪಿಗಳು ಸಂತ್ರಸ್ತೆಯನ್ನು ವೈದ್ಯಕೀಯ ಕಾಲೇಜಿನೆದುರು ಬಿಟ್ಟು, ಪರಾರಿಯಾಗಿದ್ದಾರೆ. ಮುಖ್ಯಮಂತ್ರಿಗೆ ರಾಜ್ಯವನ್ನು ನಿಭಾಯಿಸುವುದಿರಲಿ, ತಮ್ಮ ತವರು ಜಿಲ್ಲೆಯನ್ನೇ ನಿಭಾಯಿಸಲಾಗುತ್ತಿಲ್ಲ” ಎಂದು ತನ್ನ ಎಕ್ಸ್ ಪೋಸ್ಟ್ ನಲ್ಲಿ ವ್ಯಂಗ್ಯವಾಡಿದೆ.
ಉಜ್ಜಯಿನಿ ಮುಖ್ಯಮಂತ್ರಿ ಮೋಹನ್ ಯಾದವ್ ರ ತವರು ಜಿಲ್ಲೆಯಾಗಿದ್ದು, ಗೃಹ ಖಾತೆಯನ್ನೂ ಅವರೇ ಹೊಂದಿದ್ದಾರೆ.







