ಸಂಸದ ಚಂದ್ರಶೇಖರ್ ಆಝಾದ್ಗೆ ಜೀವ ಬೆದರಿಕೆ

ಚಂದ್ರಶೇಖರ್ ಆಝಾದ್ | PC : PTI
ಬಿಜ್ನೋರ್ (ಉ.ಪ್ರ.): ಅಝಾದ್ ಸಮಾಜ ಪಕ್ಷ (ಕಾನ್ಶಿರಾಮ್)ದ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಅವರಿಗೆ ವ್ಯಾಟ್ಸ್ ಆ್ಯಪ್ ಮೂಲಕ ಜೀವ ಬೆದರಿಕೆ ಸಂದೇಶ ಕಳುಹಿಸಿದ ಬಳಿಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಚಂದ್ರಶೇಖರ್ ಅಝಾದ್ ಅವರನ್ನು 10 ದಿನಗಳ ಒಳಗೆ ಹತ್ಯೆಗೈಯಲಾಗುವುದು ಎಂಬ ಬೆದರಿಕೆಯ ಸಂದೇಶವನ್ನು ಪಕ್ಷದ ಸಹಾಯವಾಣಿಯ ವ್ಯಾಟ್ಸ್ ಆ್ಯಪ್ ಸಂಖ್ಯೆ ಸ್ವೀಕರಿಸಿತ್ತು ಎಂದು ಪ್ರತಿಪಾದಿಸಿ ಪಕ್ಷದ ಕಾರ್ಯಕರ್ತ ಶೇಖ್ ಪರ್ವೇಝ್ ದೂರು ಸಲ್ಲಿಸಿದ್ದಾರೆ ಎಂದು ನಾಗಿನಾ ಎಸ್ಎಚ್ ಒ ತೇಜ್ಪಾಲ್ ಸಿಂಗ್ ತಿಳಿಸಿದ್ದಾರೆ.
ಅಝಾದ್ ಅವರು ಉತ್ತರಪ್ರದೇಶದ ನಾಗಿನಾ ಲೋಕಸಭೆಯ ಸದಸ್ಯರು ಕೂಡ ಆಗಿದ್ದಾರೆ.
ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಸಂಬಂಧಿತ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಹಾಗೂ ತನಿಖೆ ಆರಂಭಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಈ ಬೆದರಿಕೆ ಪಕ್ಷದ ರಾಷ್ಟ್ರಾಧ್ಯಕ್ಷರು ಹಾಗೂ ಹಾಲಿ ಸಂಸದರ ಜೀವಕ್ಕೆ ಗಂಭೀರ ಅಪಾಯ ಒಡ್ಡಿದೆ ಎಂದು ಪಕ್ಷದ ಮುಸ್ಲಿಂ ಭಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ದೂರುದಾರ ಪರ್ವೇಝ್ ಹೇಳಿದ್ದಾರೆ.





