ಮಧ್ಯಪ್ರದೇಶ | ಉಚಿತ ಪಡಿತರ ಸ್ವೀಕರಿಸಿದ 1,404 ಲಕ್ಷಾಧಿಪತಿ ಕುಟುಂಬಗಳ ವಿರುದ್ಧ ಸರಕಾರದಿಂದ ಕ್ರಮ

ಸಾಂದರ್ಭಿಕ ಚಿತ್ರ
ಭೋಪಾಲ್: ವಾರ್ಷಿಕ ಆದಾಯ ಲಕ್ಷಾಂತರ ರೂಪಾಯಿಗಳಿದ್ದರೂ ಗುನಾ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗಾಗಿ ಮೀಸಲಾಗಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿಯ ಉಚಿತ ಪಡಿತರ ಸ್ವೀಕರಿಸುತ್ತಿರುವ ಕನಿಷ್ಠ 1,404 ಕುಟುಂಬಗಳ ವಿರುದ್ಧ ಮಧ್ಯಪ್ರದೇಶ ಸರಕಾರ ಕ್ರಮಕ್ಕೆ ಚಾಲನೆ ನೀಡಿದೆ ಎಂದು ವರದಿಯಾಗಿದೆ.
ಈ ಕುಟುಂಬಗಳನ್ನು ಇದೀಗ ಅನುಮಾನಾಸ್ಪದ ಪ್ರವರ್ಗವನ್ನಾಗಿ ವರ್ಗೀಕರಿಸಿರುವ ಪ್ರಾಧಿಕಾರಗಳು, ನಿಮ್ಮ ಇ-ಪಡಿತರ ಚೀಟಿಯನ್ನೇಕೆ ರದ್ದಗೊಳಿಸಬಾರದು ಎಂಬ ಬಗ್ಗೆ ಇನ್ನು 15 ದಿನಗಳೊಳಗಾಗಿ ವಿವರಣೆ ನೀಡಿ ಎಂದು ನೋಟಿಸ್ ಜಾರಿಗೊಳಿಸಿವೆ.
ಈ ಫಲಾನುಭವಿಗಳ ಪೈಕಿ 1,098 ಕುಟುಂಬಗಳಿದ್ದು, ಇವುಗಳ ವಾರ್ಷಿಕ ಆದಾಯ 6 ಲಕ್ಷ ರೂ. ಮೀರಿದೆ ಎಂದು ಹೇಳಲಾಗಿದೆ. ಈ ಪಟ್ಟಿಯಲ್ಲಿ ಇನ್ನೂ 301 ಕುಟುಂಬಗಳಿದ್ದು, ಈ ಕುಟುಂಬಗಳ ಸದಸ್ಯರು ನೋಂದಾಯಿತ ಕಂಪನಿಗಳ ನಿರ್ದೇಶಕರಾಗಿದ್ದಾರೆ. ಉಳಿದಂತೆ ಕನಿಷ್ಠ ಐದು ಕುಟುಂಬಗಳ ವಾರ್ಷಿಕ ವ್ಯಾಪಾರ 25 ಲಕ್ಷ ರೂ.ಗೂ ಹೆಚ್ಚಿದೆ.
ಸದ್ಯ ನಡೆಯುತ್ತಿರುವ ತನಿಖೆಯ ಪ್ರಕಾರ, ಇಂತಹ ಬಹುತೇಕ ಫಲಾನುಭವಿಗಳು ಗುನಾ ಜಿಲ್ಲೆಯ ನಗರ ಭಾಗದಲ್ಲಿ ವಾಸಿಸುತ್ತಿದ್ದಾರೆ.
ಇಂತಹ ಒಂದು ಫಲಾನುಭವಿ ಕುಟುಂಬಗಳ ಪೈಕಿ ಗುನಾ ಪಟ್ಟಣದ ವಾರ್ಡ್ ನಂ. 18ರಲ್ಲಿ ವಾಸಿಸುತ್ತಿರುವ ಆಹಾರ ಧಾನ್ಯ ಮಾರಾಟ ವರ್ತಕರ ಕುಟುಂಬವೂ ಸೇರಿದ್ದು, ಈ ಕುಟುಂಬದ ವಾರ್ಷಿಕ ವ್ಯಾಪಾರ 25 ಲಕ್ಷಕ್ಕೂ ಹೆಚ್ಚಿದೆ ಎನ್ನಲಾಗಿದೆ. ನಾಲ್ಕು ಸದಸ್ಯರ ಈ ಕುಟುಂಬವು ಇಂದಿರಾ ಗಾಂಧಿ ಸಹಕಾರಿ ಉಪಭೋಕ್ತಾ ಭಂಡಾರ್ ನಿಂದ ವರ್ತಕರ ಪತ್ನಿಯ ಹೆಸರಿನಲ್ಲಿ ಉಚಿತ ಪಡಿತರವನ್ನು ಸ್ವೀಕರಿಸುತ್ತಿದೆ.
ಇಷ್ಟೇ ಪ್ರಮಾಣದ ವಾರ್ಷಿಕ ವ್ಯಾಪಾರ ಹೊಂದಿರುವ ಚಚೌಡ ಪಟ್ಟಣದ ಮತ್ತೊಂದು ಕುಟುಂಬ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಿಪಿಎಲ್ ಚೀಟಿದಾರರಾಗಿ ಉಚಿತ ಪಡಿತರವನ್ನು ಪಡೆಯುತ್ತಿದೆ.
ಇಂತಹ ಒಟ್ಟು 1,404 ಅನುಮಾನಾಸ್ಪದ ಫಲಾನುಭವಿ ಕುಟುಂಬಗಳನ್ನು ಪತ್ತೆ ಹಚ್ಚಿರುವ ಮಧ್ಯಪ್ರದೇಶ ಸರಕಾರ, ಅವುಗಳ ವಿರುದ್ಧ ತನಿಖೆಗೆ ಚಾಲನೆ ನೀಡಿದೆ.







