ದಟ್ಟ ಮಂಜಿನಿಂದ ನಾಲ್ಕನೇ ಟಿ20 ಪಂದ್ಯ ರದ್ದು|ಪಂದ್ಯವನ್ನು ತಿರುವನಂತಪುರಂನಲ್ಲಿ ಆಯೋಜಿಸಬಹುದಿತ್ತು ಎಂದ ಸಂಸದ ಶಶಿ ತರೂರ್

ಶಶಿ ತರೂರ್ | Photo Credit : PTI | X@BCCI
ತಿರುವನಂತಪುರಂ: ನಿನ್ನೆ (ಬುಧವಾರ) ಲಕ್ನೊದ ಏಕನಾ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನಾಲ್ಕನೆಯ ಟಿ-20 ಪಂದ್ಯ ದಟ್ಟ ಮಂಜು ಹಾಗೂ ಕಡಿಮೆ ಗೋಚರತೆಯಿಂದಾಗಿ ರದ್ದುಗೊಂಡಿದೆ. ಮೈದಾನದ ತುಂಬಾ ದಟ್ಟ ಮಂಜಿನ ಹೊದಿಕೆ ಆವರಿಸಿದ್ದುದರಿಂದ, ಪಂದ್ಯ ವಿಳಂಬಗೊಂಡಿತ್ತು. ಹಲವು ಬಾರಿ ಮೈದಾನದ ತಪಾಸಣೆ ನಡೆಸಿದ ಬಳಿಕ, ಪಂದ್ಯವನ್ನು ರದ್ದುಗೊಳಿಸಲಾಗಿತ್ತು.
ಇದರ ಬೆನ್ನಿಗೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ವಾಯು ಗುಣಮಟ್ಟ ಸೂಚ್ಯಂಕ 68ರಷ್ಟಿದ್ದ ತಿರುವನಂತಪುರಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನಾಲ್ಕನೆಯ ಟಿ-20 ಪಂದ್ಯವನ್ನು ಆಯೋಜಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಪಂದ್ಯದ ಪ್ರಾರಂಭವನ್ನು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ಎದುರು ನೋಡುತ್ತಿದ್ದರು. ಆದರೆ, ಉತ್ತರ ಭಾರತದಾದ್ಯಂತ ಆವರಿಸಿರುವ ದಟ್ಟ ಮಂಜು ಹಾಗೂ 411ರಷ್ಟಿದ್ದ ವಾಯು ಗುಣಮಟ್ಟ ಸೂಚ್ಯಂಕದ ಕಾರಣಕ್ಕೆ ಗೋಚರತೆಯ ಪ್ರಮಾಣ ಕಳಪೆಯಾಗಿತ್ತು ಹಾಗೂ ಪಂದ್ಯ ಪ್ರಾರಂಭಗೊಳ್ಳಲು ಅವಕಾಶ ದೊರೆಯಲಿಲ್ಲ” ಎಂದು ಬರೆದುಕೊಂಡಿದ್ದಾರೆ.
“ವಾಯು ಗುಣಮಟ್ಟ ಸೂಚ್ಯಂಕ ಸದ್ಯ 68ರಷ್ಟಿರುವ ತಿರುವನಂತಪುರಂನಲ್ಲಿ ಅವರು ಪಂದ್ಯವನ್ನು ಆಯೋಜಿಸಬಹುದಿತ್ತು” ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕವಾದ 68 ಅನ್ನು ಸಮಾಧಾನಕರ ವಾಯು ಗುಣಮಟ್ಟ ಎಂದು ಪರಿಗಣಿಸಲಾಗಿದೆ.
ಶಶಿ ತರೂರ್ ಅವರ ಈ ಪೋಸ್ಟ್ ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದ್ದು, ಪಂದ್ಯವನ್ನು ಸ್ಥಳಾಂತರಗೊಳಿಸುವುದಕ್ಕಿಂತ, ವಾಯು ಮಾಲಿನ್ಯವನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂಬುದನ್ನು ಈ ಘಟನೆ ಮತ್ತೆ ನೆನಪಿಸಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನಿಜ – ಇಂದು ತಿರುವನಂತಪುರಂ ತುಂಬಾ ಉತ್ತಮ ಆಯ್ಕೆಯಾಗಿತ್ತು. ಆದರೆ, ಕ್ರೀಡೆಯನ್ನು ಆಯೋಜಿಸಲು ವಾಯು ಮಾಲಿನ್ಯ ನಿರ್ಣಾಯಕ ಸಂಗತಿಯಾಗಿರುವಾಗ, ನಾವು ವಾಯು ಮಾಲಿನ್ಯವನ್ನು ನಿಯಂತ್ರಿಸಬೇಕಿರುವುದು ಅತಿ ದೊಡ್ಡ ಆದ್ಯತೆಯಲ್ಲವೆ?” ಎಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಪ್ರಶ್ನಿಸಿದ್ದಾರೆ.
“ವಾಯು ಗುಣಮಟ್ಟ ಸೂಚ್ಯಂಕ ಪಂದ್ಯದ ವೇಳಾಪಟ್ಟಿ ನಿರ್ಧರಿಸುವಲ್ಲಿ ನಿರ್ಣಾಯಕ ಸಂಗತಿಯಾಗಿರುವಾಗ, ಪರಿಸರವನ್ನು ಉಪೇಕ್ಷಿಸುವುದು ಇನ್ನೆಂದಿಗೂ ಸಾಧ್ಯವಿಲ್ಲ ಎಂಬುದನ್ನು ನೆನಪಿಡಬೇಕಿದೆ. ವಾಯು ಮಾಲಿನ್ಯವು ಪ್ರತಿಯೊಬ್ಬರ ಜೀವನ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅದೀಗ ಕ್ರೀಡೆಯ ಮೇಲೂ ತನ್ನ ಪರಿಣಾಮ ಬೀರುತ್ತಿದೆ” ಎಂದು ಮತ್ತೋರ್ವ ಎಚ್ಚರಿಸಿದ್ದಾರೆ.







