ಎಂ.ಎಸ್. ಧೋನಿ ಅಪ್ಪಟ ಅಭಿಮಾನಿ ಆತ್ಮಹತ್ಯೆ
ಮನೆಗೆ ʼಹೋಮ್ ಆಫ್ ಧೋನಿ ಫ್ಯಾನ್ʼಹೆಸರನ್ನಿಟ್ಟಿದ್ದ ಗೋಬಿ ಕೃಷ್ಣನ್
![ಎಂ.ಎಸ್. ಧೋನಿ ಅಪ್ಪಟ ಅಭಿಮಾನಿ ಆತ್ಮಹತ್ಯೆ ಎಂ.ಎಸ್. ಧೋನಿ ಅಪ್ಪಟ ಅಭಿಮಾನಿ ಆತ್ಮಹತ್ಯೆ](https://www.varthabharati.in/h-upload/2024/01/20/1235057-thenewsminute2024-01ad2d1e30-a523-4eff-8b3d-36336e969e71gobiscreengrab20012024.avif)
Photo : thenewsminute.com
ಚೆನ್ನೈ: ತನ್ನ ಮನೆಗೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದ ಬಣ್ಣದ ಪೇಂಟ್ ಮಾಡಿಸಿದ್ದ ಹಾಗೂ ಮನೆಗೆ “ಹೋಮ್ ಆಫ್ ಧೋನಿ ಫ್ಯಾನ್” (ಧೋನಿ ಅಭಿಮಾನಿಯ ಮನೆ) ಎಂಬ ಹೆಸರನ್ನಿಟ್ಟಿದ್ದ ಎಂ.ಎಸ್. ಧೋನಿ ಅವರ ಅಪ್ಪಟ ಅಭಿಮಾನಿ ಗೋಬಿ ಕೃಷ್ಣನ್ ಎಂಬವರು ಜ. 18, ಗುರುವಾರ ಆತ್ಮಹತ್ಯೆಗೈದಿದ್ದಾರೆ. ಆರ್ಥಿಕ ಸಂಕಷ್ಟ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ.
ತಮಿಳುನಾಡಿನ ಕುಡ್ಡಲೂರು ಜಿಲ್ಲೆಯ ತಿತ್ತಕುಡಿ ನಿವಾಸಿಯಾಗಿರುವ ಕೃಷ್ಣನ್ 2020ರಲ್ಲಿ ತಮ್ಮ ಮನೆಗೆ ಕಡು ಹಳದಿ ಬಣ್ಣದ ಪೇಂಟ್ ಹಾಕಿಸಿದ್ದರಲ್ಲದೆ ಅದರಲ್ಲಿ ಸಿಎಸ್ಕೆ ಲಾಂಛನ ಹಾಗೂ ಧೋನಿ ಅವರ ಚಿತ್ರ ಕೂಡ ಮೂಡಿಸಿ ಸುದ್ದಿಯಾಗಿದ್ದರು. ಇದಕ್ಕಾಗಿ ಅವರು ರೂ 1.5 ಲಕ್ಷ ಖರ್ಚು ಮಾಡಿದ್ದರೆನ್ನಲಾಗಿದೆ. ಕೃಷ್ಣನ್ ಅವರ ಅಭಿಮಾನವನ್ನು ಸ್ವತಃ ಧೋನಿ ಕೊಂಡಾಡಿದ್ದರು.
ದುಬೈಯಲ್ಲಿ ಉದ್ಯೋಗದಲ್ಲಿದ್ದ ಕೃಷ್ಣನ್ ಒಂದೆರಡು ವರ್ಷಗಳ ಹಿಂದೆ ಸ್ವದೇಶಕ್ಕೆ ವಾಪಸಾಗಿದ್ದರು. ದುಬೈಯಲ್ಲಿ ಜರ್ಮನ್ ಟ್ರೇಡಿಂಗ್ ಕಂಪನಿಯೊಂದರಲ್ಲಿ ಅವರು ಮಾರ್ಕೆಟ್ ಅನಾಲಿಸ್ಟ್ ಆಗಿದ್ದರು. ಆದರೆ ಭಾರತಕ್ಕೆ ಮರಳಿದ ನಂತರ ಅವರು ಷೇರು ಮಾರುಕಟ್ಟೆಯಲ್ಲಿ ಅಪಾರ ಹೂಡಿಕೆ ಮಾಢಿದ್ದರಲ್ಲದೆ ಅದಕ್ಕಾಗಿ ಸಾಲ ಕೂಡ ಪಡೆದಿದ್ದರು. ಆದರೆ ತೀವ್ರ ನಷ್ಟಕ್ಕೊಳಗಾಗಿ ಆರ್ಥಿಕ ಸಂಕಷ್ಟಕ್ಕೆ ಅವರು ಗುರಿಯಾಗಿದ್ದರು.
ಬುಧವಾರ ಅವರ ಊರಿನಲ್ಲಿ ಪೊಂಗಲ್ ಆಚರಣೆಯ ವೇಳೆ ಅವರು ಕೆಲ ಜನರೊಂದಿಗೆ ವಾಗ್ವಾದಕ್ಕಿಳಿದಿದ್ದರೆಂದು ತಿಳಿದು ಬಂದಿದೆ. ಮರುದಿನ ಬೆಳಿಗ್ಗೆ ಅವರು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು.