ಬಹುಕೋಟಿ ಜಿಎಸ್ಟಿ ಹಗರಣ: ಮತ್ತೆ ಮೂವರು ವಶಕ್ಕೆ, ಬಂಧಿತರ ಸಂಖ್ಯೆ 19ಕ್ಕೆ ಏರಿಕೆ

Photo : PTI
ನೋಯ್ಡಾ: ಸರಕಾರಕ್ಕೆ ಆದಾಯ ನಷ್ಟ ಉಂಟು ಮಾಡಿದ ಬಹುಕೋಟಿ ಜಿಎಸ್ಟಿ ಹಗರಣಕ್ಕೆ ಸಂಬಂಧಿಸಿ ನೋಯ್ಡಾ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಈ ಹಗರಣದಲ್ಲಿ ನಕಲಿ ಆಧಾರ್ ಕಾರ್ಡ್ಗಳ ಆಧಾರದ ಮೇಲೆ ಸಾವಿರಾರು ಬೋಗಸ್ ಕಂಪೆನಿಗಳನ್ನು ಸೃಷ್ಟಿಸಿ, ಅದರಿಂದ ನಕಲಿ ಇನ್ವಾಯ್ಸ್ಗಳನ್ನು ಸಿದ್ಧಪಡಿಸಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಕ್ಲೈಮ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಸೆಕ್ಟರ್ 20 ಪೊಲೀಸ್ ಠಾಣೆ ಈ ಜಿಎಸ್ಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರವಿವಾರ ಮತ್ತೆ ಮೂರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮಿತ್ ಆಲಿಯಾಸ್ ಮೋಂತಿ (42), ಅಜಯ್ ಆಲಿಯಾಸ್ ಮಿಂಟು (41) ಹಾಗೂ ಮಹೇಶ್ (20) ಎಂದು ಗುರುತಿಸಲಾಗಿದೆ. ಇವರೆಲ್ಲರೂ ನಕಲಿ ಇನ್ವಾಯ್ಸ್ ಸಿದ್ಧಪಡಿಸುವುದರಲ್ಲಿ ಭಾಗಿಯಾಗಿದ್ದರು ಎಂದು ಹೆಚ್ಚುವರಿ ಡಿಸಿಪಿ (ನೋಯ್ಡಾ) ಶಕ್ತಿ ಮೋಹನ್ ಅವಸ್ಥಿ ಹೇಳಿದ್ದಾರೆ.
ಈ ಮೂವರು ಈ ಹಿಂದೆ ಬಂಧಿತರಾದ 15 ಸದಸ್ಯರ ದೊಡ್ಡ ಗುಂಪಿನ ಭಾಗ. ಇವರು ಸಿರ್ಸಾ, ಹರ್ಯಾಣದಲ್ಲಿ ವಾಸಿಸುತ್ತಿದ್ದರು ಹಾಗೂ ಕಳೆದ ಐದು ವರ್ಷಗಳಿಂದ ಈ ಗುಂಪಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ನಕಲಿ ಜಿಎಸ್ಟಿ ಬಿಲ್ಗಳಿಂದ ಸ್ವೀಕರಿಸಲಾದ ಹಣವನ್ನು ಸಂಗ್ರಹಿಸುವ ಹಾಗೂ ವರ್ಗಾವಣೆ ಮಾಡುವ ಕೆಲಸದಲ್ಲಿ ಇವರು ಭಾಗಿಯಾಗಿದ್ದರು. ಇವರು ಎನ್ಸಿಆರ್ ಹಾಗೂ ಹರ್ಯಾಣದ ಭಾಗಗಳಲ್ಲಿ ವಹಿವಾಟು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ನೋಯ್ಡಾ ಪೊಲೀಸರು ಜಿಎಸ್ಟಿ ಹಗರಣವನ್ನು ಭೇದಿಸಿದ್ದರು. ಇದರಲ್ಲಿ ಸುಮಾರು 3,077 ನಕಲಿ ಕಂಪೆನಿಗಳನ್ನು ಪತ್ತೆ ಹಚ್ಚಿದ್ದರು. ಈ ನಕಲಿ ಕಂಪೆನಿಗಳಿಂದ ಸುಮಾರು 8,500 ಕೋ.ರೂ. ವಹಿವಾಟು ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆ ಬಹಿರಂಗಪಡಿಸಿತ್ತು.







