ಮುಂಬೈ 19 ಮಂದಿಯ ಒತ್ತೆಸೆರೆ ಪ್ರಕರಣ | ಮಹಾರಾಷ್ಟ್ರ ಸರಕಾರದಿಂದ 2.4 ಕೋಟಿ ರೂ. ಬಾಕಿ ಪಾವತಿ ಬಯಸಿದ್ದ ರೋಹಿತ್ ಆರ್ಯ?

Photo Credit : ANI
ಮುಂಬೈ, ಅ.31: ತನ್ನ ಕಂಪೆನಿಯ ನೇತೃತ್ವದಲ್ಲಿ ನಗರದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಶಿಕ್ಷಣ ಇಲಾಖೆಯು ತನಗೆ 2 ಕೋಟಿ ರೂ. ಬಾಕಿಯಿರಿಸಿದೆಯೆಂದು 19 ಮಂದಿಯ ಒತ್ತೆಸೆರೆ ಘಟನೆಯಲ್ಲಿ ಮುಂಬೈ ಪೊಲೀಸರ ಗುಂಡಿಗೆ ಬಲಿಯಾದ ಚಿತ್ರ ನಿರ್ಮಾಪಕ ರೋಹಿತ್ ಆರ್ಯನ ಹೇಳಿಕೆಯಿಂದ ಮಹಾರಾಷ್ಟ್ರ ಸರಕಾರ ಅಂತರವನ್ನು ಕಾಯ್ದುಕೊಂಡಿದೆ.
ರೋಹಿತ್ ಆರ್ಯ ಗುರುವಾರ ಮುಂಬೈನ ಪೊವಾಯಿ ಪ್ರದೇಶದ ಸ್ಟುಡಿಯೋ ಒಂದರಲ್ಲಿ 17 ಮಂದಿ ಮಕ್ಕಳು ಸೇರಿದಂತೆ 19 ಮಂದಿಯನ್ನು ಒತ್ತೆಸೆರೆಯಿರಿಸಿದ್ದ. ಈ ಸಂದರ್ಭ ಆತ ಪ್ರಸಾರ ಮಾಡಿದ ವೀಡಿಯೊದಲ್ಲಿ ಈ ಆರೋಪ ಮಾಡಿದ್ದನೆನ್ನಲಾಗಿದೆ. ತನ್ನ ಸರಳ ಹಾಗೂ ನೈತಿಕಕವಾದ ಬೇಡಿಕೆಗಳಿಗೆ ಉತ್ತರವನ್ನು ತಾನು ಬಯಸುವುದಾಗಿ ಆತ ವೀಡಿಯೊದಲ್ಲಿ ಹೇಳಿದ್ದ.
ಆನಂತರ ಪೊಲೀಸರು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ರೋಹಿತ್ ಆರ್ಯನನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಬಳಿಕ ಮಹಾರಾಷ್ಟ್ರ ಸರಕಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದೆ. ಚಿತ್ರ ನಿರ್ಮಾಪಕ ರೋಹಿತ್ ಆರ್ಯ ಹಾಗೂ ಅಪ್ಸರಾ ಮೆಡಿಯಾ ಸಂಸ್ಥೆಯನ್ನು 2022 ಹಾಗೂ 2023ರ ಸಾಲಿನ ನಗರ ನಿರ್ಮಲೀಕರಣ ಅಭಿಯಾನ ‘ ಲೆಟ್ಸ್ ಚೇಂಜ್’ಗೆ ಆಯ್ಕೆ ಮಾಡಲಾಗಿತ್ತು. ಈ ಸ್ವಚ್ಛತಾ ಆಂದೋಲದಲ್ಲಿ 59 ಲಕ್ಷ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು. ಈ ಅಭಿಯಾನಕ್ಕಾಗಿ 9.9 ಲಕ್ಷ ರೂ.ಗಳನ್ನು ಮಹಾರಾಷ್ಟ್ರ ಸರಕಾರವು 2023ರ ಜೂನ್ 30ರಂದು ಬಿಡುಗಡೆಗೊಳಿಸಿತ್ತು.
ಈ ಅಭಿಯಾನದ ಎರಡನೆ ಹಂತವಾಗಿ 2023-24ನೇ ಸಾಲಿನಲ್ಲಿ ‘ಮುಖ್ಯಮಂತ್ರಿ ಮಾಝಿ ಶಾಲಾ ಸುಂದರ್ ಶಾಲಾ’ ಯೋಜನೆಯ ಮೂಲಕ ‘ಸ್ವಚ್ಛತಾ ವೀಕ್ಷಕ’ರಿಗಾಗಿ 2 ಕೋಟಿ ರೂ. ಸೇರಿದಂತೆ 20.63 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು ಎಂದು ಮಹಾರಾಷ್ಟ್ರ ಸರಕಾರದ ಹೇಳಿಕೆ ತಿಳಿಸಿದೆ.







