ಮುಂಬೈ:70ರ ಹರೆಯದ ವೈದ್ಯೆಗೆ ಎಂಟು ದಿನಗಳ ‘ಡಿಜಿಟಲ್ ಅರೆಸ್ಟ್’, 3 ಕೋಟಿ ರೂ. ವಂಚನೆ

ಸಾಂದರ್ಭಿಕ ಚಿತ್ರ
ಮುಂಬೈ: ಸೈಬರ್ ಕ್ರಿಮಿನಲ್ ಗಳು ಕಪೋಲಕಲ್ಪಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವನ್ನು ಹೊರಿಸಿ 70ರ ಹರೆಯದ ವೈದ್ಯೆಯೋರ್ವರನ್ನು ‘ಡಿಜಿಟಲ್ ಬಂಧನ’ದಲ್ಲಿರಿಸಿ ಮೂರು ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಮುಂಬೈ ಪೋಲಿಸ್ ಅಧಿಕಾರಿಯೋರ್ವರು ಶನಿವಾರ ತಿಳಿಸಿದರು.
ಮೇ ತಿಂಗಳಲ್ಲಿ ಸಂತ್ರಸ್ತ ವೈದ್ಯೆ ದೂರಸಂಪರ್ಕ ಇಲಾಖೆಯ ಸಿಬ್ಬಂದಿ ಅನಿಲ್ ಕುಮಾರ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯಿಂದ ಕರೆಯನ್ನು ಸ್ವೀಕರಿಸಿದ್ದು, ಅಪರಾಧ ಚಟುವಟಿಕೆಗಳಲ್ಲಿ ಬಳಸಲು ಅವರ ವೈಯಕ್ತಿಕ ವಿವರಗಳೊಂದಿಗೆ ಸಿಮ್ ಕಾರ್ಡ್ನ್ನು ಖರೀದಿಸಲಾಗಿದೆ ಎಂದು ಆತ ತಿಳಿಸಿದ್ದ.
ನಂತರ ಮತ್ತೊಬ್ಬ ವ್ಯಕ್ತಿ ಅವರಿಗೆ ಕರೆ ಮಾಡಿ ತಾನು ಕ್ರೈಂ ಬ್ರ್ಯಾಂಚ್ ಅಧಿಕಾರಿ ಸಮಾಧಾನ ಪವಾರ್ ಎಂದು ಹೇಳಿಕೊಂಡಿದ್ದ. ಈ ಹಿಂದೆ ಅಕ್ರಮ ಹಣ ವರ್ಗಾವಣೆಗಾಗಿ ಬಂಧಿಸಲ್ಪಟ್ಟು ಪ್ರಸ್ತುತ ವೈದ್ಯಕೀಯ ಜಾಮೀನಿನಲ್ಲಿ ಹೊರಗಿರುವ ವಾಯುಯಾನ ಸಂಸ್ಥೆಯ ಮಾಲಿಕನ ಮನೆಯ ಮೇಲೆ ನಡೆಸಿದ್ದ ದಾಳಿಯಲ್ಲಿ ಸಂತ್ರಸ್ತೆಯ ಬ್ಯಾಂಕ್ ಖಾತೆಗಳು ಮತ್ತು ಡೆಬಿಟ್ ಕಾರ್ಡ್ ವಿವರಗಳು ಪತ್ತೆಯಾಗಿದ್ದವು ಎಂದು ಆತ ತಿಳಿಸಿದ್ದ ಎಂದು ಪೋಲಿಸ್ ಅಧಿಕಾರಿ ಹೇಳಿದರು.
ವೈದ್ಯೆಗೆ ಹಲವಾರು ದಾಖಲೆಗಳನ್ನು ಕಳುಹಿಸಿದ್ದ ಆರೋಪಿ ಇವುಗಳನ್ನು ಸಿಬಿಐ, ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ಮತ್ತು ಆರ್ಬಿಐನಿಂದ ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದ.
ಪೋಲಿಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೋರ್ವನೂ ವೈದ್ಯೆಯ ಪತಿಯೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಿದ್ದ ಮತ್ತು ಇದೆಲ್ಲವೂ ಆಕೆ ಪ್ರಕರಣವನ್ನು ನಂಬುವಂತೆ ಮಾಡಿತ್ತು. ನಂತರ ವೈದ್ಯೆಯನ್ನು ಎಂಟು ದಿನಗಳ ಕಾಲ ಡಿಜಿಟಲ್ ಅರೆಸ್ಟ್ಲ್ಲಿ ಇರಿಸಿದ್ದ ಸೈಬರ್ ವಂಚಕರು ಈ ಅವಧಿಯಲ್ಲಿ ಪ್ರತಿ ಗಂಟೆಗೊಮ್ಮೆ ತಮಗೆ ಕರೆ ಮಾಡುವಂತೆ ಸೂಚಿಸಿದ್ದರು. ಇವೆಲ್ಲದರಿಂದ ಭಯಗೊಂಡಿದ್ದ ವೈದ್ಯೆ ಅವರು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಮೂರು ಕೋಟಿ ರೂ.ಗಳನ್ನು ವರ್ಗಾಯಿಸಿದ್ದರು.
ಜೂ.5ರಂದು ವೈದ್ಯೆ ಸೈಬರ್ ಪೋಲಿಸ್ ಠಾಣೆಯನ್ನು ಸಂಪರ್ಕಿಸಿದ ಬಳಿಕ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಆರೋಪಿಯು 82 ಲಕ್ಷ ರೂ.ಗಳನ್ನು ಕ್ರಿಪ್ಟೋಕರೆನ್ಸಿಗೆ ಪರಿವರ್ತಿಸಿದ್ದು ಪತ್ತೆಯಾಗಿದ್ದು, ವಂಚಕರನ್ನು ಬಂಧಿಸಲು ಮತ್ತು ಹಣವನ್ನು ವಾಪಸ್ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದರು.







