1995ರಿಂದ ಕೋಟ್ಯಂತರ ರೂ.ಗಳನ್ನು ಸ್ವೀಕರಿಸಿದ್ದ ಮುಂಬೈನ ನಕಲಿ ವಿಜ್ಞಾನಿ!

ಅಖ್ತರ್ ಹುಸೇನಿ | PC : NDTV
ಮುಂಬೈ,ನ.3: ಇಲ್ಲಿಯ ಭಾಭಾ ಅಣು ಸಂಶೋಧನಾ ಕೇಂದ್ರದ(ಬಿಎಆರ್ಸಿ) ವಿಜ್ಞಾನಿಯ ಸೋಗು ಹಾಕಿದ್ದಕ್ಕಾಗಿ ಬಂಧಿಲ್ಪಟ್ಟಿರುವ ಅಖ್ತರ್ ಹುಸೇನಿ(60) ಸೂಕ್ಷ್ಮ ಪರಮಾಣು ದತ್ತಾಂಶಗಳ ವಿನಿಮಯಕ್ಕಾಗಿ ಕೋಟ್ಯಂತರ ವಿದೇಶಿ ಹಣವನ್ನು ಸ್ವೀಕರಿಸಿದ್ದ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ಸೋಮವಾರ ವರದಿ ಮಾಡಿದೆ.
ಬಿಎಆರ್ಸಿ ವಿಜ್ಞಾನಿ ಎಂದು ಸುಳ್ಳು ಹೇಳಿಕೊಂಡು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದ ಹುಸೇನಿಯನ್ನು ಕಳೆದ ತಿಂಗಳು ಪೋಲಿಸರು ಬಂಧಿಸಿದ್ದರು. ಜಾರ್ಖಂಡ್ ನ ಜಮ್ಷೆಡ್ ಪುರ ನಿವಾಸಿಯಾದ ಆತನ ಬಳಿಯಿಂದ 10ಕ್ಕೂ ಅಧಿಕ ನಕ್ಷೆಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಡೇಟಾ, ಹಲವಾರು ನಕಲಿ ಪಾಸ್ಪೋರ್ಟ್ ಗಳು ,ಆಧಾರ್ ಮತ್ತು ಪಾನ್ ಕಾರ್ಡ್ ಗಳು ಹಾಗೂ ನಕಲಿ ಬಿಎಆರ್ಸಿ ಗುರುತು ಚೀಟಿಯನ್ನೂ ವಶಪಡಿಸಿಕೊಳ್ಳಲಾಗಿತ್ತು. ಆತನ ಸೋದರ ಆದಿಲ್ ನನ್ನೂ ದಿಲ್ಲಿಯಲ್ಲಿ ಬಂಧಿಸಲಾಗಿತ್ತು.
ಮುಂಬೈ ಪೊಲಿಸ್ನ ಕ್ರೈಂ ಬ್ರ್ಯಾಂಚ್ ಪ್ರಕಾರ ಹುಸೇನಿ ಸೋದರರು 1995ರಿಂದಲೇ ವಿದೇಶಿ ಹಣವನ್ನು ಸ್ವೀಕರಿಸತೊಡಗಿದ್ದರು. ಪ್ರಾರಂಭದಲ್ಲಿ ಅವರಿಗೆ ಕೆಲವು ಲಕ್ಷ ರೂ.ಗಳನ್ನುನೀಡಲಾಗುತ್ತಿತ್ತು. ಆದರೆ 2000ರ ಬಳಿಕ ಇದು ಕೋಟಿಗಳಿಗೇರಿತ್ತು.
ಬಿಎಆರ್ಸಿ ಮತ್ತು ಇತರ ಪರಮಾಣು ಸ್ಥಾವರಗಳಿಗೆ ಸಂಬಂಧಿಸಿದ ರಹಸ್ಯ ನೀಲನಕ್ಷೆಗಳ ವಿನಿಮಯಕ್ಕಾಗಿ ಅವರಿಗೆ ಈ ಹಣವನ್ನು ನೀಡಲಾಗಿತ್ತು ಎಂದು ಶಂಕಿಸಲಾಗಿದೆ.
ಪೋಲಿಸರು ಹುಸೇನಿ ಹೆಸರಿನಲ್ಲಿ ಖಾಸಗಿ ಬ್ಯಾಂಕ್ ಖಾತೆಯೊಂದನ್ನೂ ಪತ್ತೆ ಹಚ್ಚಿದ್ದು ಅದರಲ್ಲಿ ಶಂಕಾತ್ಮಕ ವಹಿವಾಟುಗಳು ಕಂಡುಬಂದಿವೆ. ನಿಖರವಾದ ಮೊತ್ತ ಮತ್ತು ಹಣಕಾಸಿನ ಮೂಲವನ್ನು ತಿಳಿದುಕೊಳ್ಳಲು ಪೋಲಿಸರು ಬ್ಯಾಂಕಿನಿಂದ ಸಂಪೂರ್ಣ ವಹಿವಾಟು ವಿವರಗಳನ್ನು ಕೋರಿದ್ದಾರೆ. ಈ ಸೋದರರು ತಾವು ಬಳಸಿದ್ದ ಹಲವಾರು ಇತರ ಬ್ಯಾಂಕ್ ಖಾತೆಗಳನ್ನು ಮುಚ್ಚಿದ್ದಾರೆ.
ಹುಸೇನಿ ಸಹೋದರರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಮತ್ತು ಐಎಸ್ಐ ಜೊತೆ ಸಂಪರ್ಕ ಹೊಂದಿದ್ದರು ಎಂದೂ ಪೋಲಿಸರು ಶಂಕಿಸಿದ್ದಾರೆ.







