ಮುಂಬೈ ವಿಮಾನ ನಿಲ್ದಾಣದಲ್ಲಿ 7.32 ಕೋಟಿ ರೂ.ಗಳ ಡ್ರಗ್ಸ್ ವಶ; ನಾಲ್ವರ ಬಂಧನ

PC : indianexpress.com
ಮುಂಬೈ: ಇಲ್ಲಿಯ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜು.15 ಮತ್ತು ಜು.20ರ ನಡುವೆ ಸರಣಿ ಕಾರ್ಯಾಚರಣೆಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿ 7.32 ಕೋಟಿ ರೂ.ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
ಮೊದಲ ಘಟನೆಯಲ್ಲಿ ಜು.15ರಂದು ಬ್ಯಾಂಕಾಂಕ್ನಿಂದ ಆಗಮಿಸಿದ್ದ ಪ್ರಯಾಣಿಕನಿಂದ ಟ್ರಾಲಿ ಬ್ಯಾಗ್ನಲ್ಲಿ ಬಚ್ಚಿಡಲಾಗಿದ್ದ 610 ಗ್ರಾಂ ಹೈಡ್ರೊಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ನಂತರದ ಎರಡು ದಿನಗಳಲ್ಲಿ ಬ್ಯಾಂಕಾಂಕ್ನಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 5.25 ಕೆ.ಜಿ ಮತ್ತು 1.45 ಕೆ.ಜಿ.ಹೈಡ್ರೊಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಹೈಡ್ರೋಪೋನಿಕ್ ಗಾಂಜಾವನ್ನು ಮಣ್ಣಿನ ಬದಲು ನೀರಿನಲ್ಲಿ ಬೆಳೆಸಲಾಗುತ್ತದೆ.
ಪ್ರತ್ಯೇಕ ಪ್ರಕರಣದಲ್ಲಿ ರಿಯಾದ್ಗೆ ತೆರಳುತ್ತಿದ್ದ ಪ್ರಯಾಣಿಕನಿಂದ ನಿಷೇಧಿತ ಮಾದಕ ವಸ್ತು ಕೊಡೈನ್ ಫಾಸ್ಫೇಟ್ ಒಳಗೊಂಡಿದ್ದ ಕೆಮ್ಮಿನ ಸಿರಪ್ಗಳ 99 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.





