ಮುಂಬೈ ವಿಮಾನ ನಿಲ್ದಾಣದಲ್ಲಿ 53 ಕೋಟಿ ರೂ. ಮೌಲ್ಯದ ಗಾಂಜಾ, ಚಿನ್ನ, ವಜ್ರ ವಶ; 20 ಜನರ ಬಂಧನ

ಸಾಂದರ್ಭಿಕ ಚಿತ್ರ
ಮುಂಬೈ, ನ. 21: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ವಾರದಲ್ಲಿ ಹಲವು ಪ್ರಕರಣಗಳಲ್ಲಿ 53 ಕೋಟಿ ರೂ. ಮೌಲ್ಯದ ಹೈಡ್ರೋಫೋನಿಕ್ ಗಾಂಜಾ, ಚಿನ್ನ ಹಾಗೂ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಹಾಗೂ 20 ಮಂದಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನವೆಂಬರ್ 13 ಹಾಗೂ 20ರ ನಡುವೆ ನಡೆದ ವಿವಿಧ ಕಾರ್ಯಾಚರಣೆಗಳ ಸಂದರ್ಭ ಈ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತದ ಕಾರ್ಯಾಚರಣೆಯಲ್ಲಿ 7 ಪ್ರಕರಣಗಳಲ್ಲಿ 25.31 ಕೋಟಿ ರೂ. ಮೌಲ್ಯದ 25.318 ಕಿ.ಗ್ರಾಂ ಹೈಡ್ರೋಫೋನಿಕ್ ಗಾಂಜಾವನ್ನು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಹಾಗೂ ಹಲವು ಪ್ರಯಾಣಿಕರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇನ್ನೊಂದು ಕಾರ್ಯಾಚರಣೆಯಲ್ಲಿ 7 ಪ್ರಕರಣಗಳಲ್ಲಿ 26.981 ಕೋಟಿ ರೂ. ಮೌಲ್ಯದ 26.981 ಕಿ.ಗ್ರಾಂ. ಹೈಡ್ರೋಫೋನಿಕ್ ಗಾಂಜಾವನ್ನು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಹಾಗೂ 8 ಮಂದಿಯನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಕಾರ್ಯಾಚರಣೆಗಳಲ್ಲದೆ, ಇದೇ ಸಂದರ್ಭ 4 ಚಿನ್ನ ಕಳ್ಳ ಸಾಗಾಟದ ಪ್ರತ್ಯೇಕ ಪ್ರಕರಣಗಳನ್ನು ಕೂಡ ಕಂದಾಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಗಳಲ್ಲಿ 65.57 ಲಕ್ಷ ರೂ. ಮೌಲ್ಯದ ಒಟ್ಟು 551 ಗ್ರಾಂ. 24 ಕ್ಯಾರೇಟ್ ಚಿನ್ನವನ್ನು ನಾಲ್ವರು ಪ್ರಯಾಣಿಕರಿಂದ ವಶಪಡಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕಂದಾಯ ಅಧಿಕಾರಿಗಳು ವಜ್ರಗಳನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಆತನಿಂದ ಒಟ್ಟು 54.13 ಲಕ್ಷ ರೂ. ಮೌಲ್ಯದ ವಜ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







