ಮುಂಬೈ ಪೊಲೀಸರು ನನ್ನ ಜೀವನವನ್ನು ಹಾಳು ಮಾಡಿದರು: ಸೈಫ್ ದಾಳಿ ಪ್ರಕರಣದಲ್ಲಿ ಬಂಧಿತನಾಗಿ, ಬಿಡುಗಡೆಯಾಗಿರುವ ವ್ಯಕ್ತಿಯ ಅಳಲು

Credit : PTI
ಮುಂಬೈ: ನನಗೆ ಕೆಲಸವಿಲ್ಲದಂತಾಗಿದೆ, ನನ್ನ ಭಾವಿ ವಧು ನನ್ನನ್ನು ದೂರ ಮಾಡಿದ್ದಾಳೆ ಹಾಗೂ ನನ್ನ ಕುಟುಂಬ ಅನುಮಾನ, ಅವಮಾನವನ್ನು ಎದುರಿಸುತ್ತಿದೆ ಎಂದು ಚತ್ತೀಸ್ ಗಢದ ದುರ್ಗ್ ನಲ್ಲಿ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿ ಮುಂಬೈ ಪೊಲೀಸರಿಂದ ವಶಕ್ಕೊಳಗಾಗಿ, ನಂತರ ಬಿಡುಗಡೆಯಾಗಿದ್ದ ವ್ಯಕ್ತಿ ರವಿವಾರ ಅಳಲು ತೋಡಿಕೊಂಡಿದ್ದಾರೆ.
ಜನವರಿ 18ರಂದು ಮುಂಬೈ ಪೊಲೀಸರ ಸುಳಿವಿನ ಮೇರೆಗೆ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ನಿಂದ ಕೋಲ್ಕತ್ತಾದ ಶಾಲಿಮಾರ್ ಜ್ಞಾನೇಶ್ವರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದ ಆಕಾಶ್ ಕನೋಜಿಯ (31) ಎಂಬ ಚಾಲಕನನ್ನು ರೈಲ್ವೆ ರಕ್ಷಣಾ ಪಡೆಯು ವಶಕ್ಕೆ ಪಡೆದಿತ್ತು.
ಇದಾದ ನಂತರ, ಜನವರಿ 19ರ ಬೆಳಗ್ಗೆ ಮುಂಬೈ ಪೊಲೀಸರು ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಝಾದ್ ಮುಹಮ್ಮದ್ ರೊಹಿಲ್ಲಾ ಅಮೀನ್ ಫಕೀರ್ ಅಲಿಯಾಸ್ ವಿಜಯ್ ದಾಸ್ ಎಂಬಾತನನ್ನು ನೆರೆಯ ಥಾಣೆ ನಗರದಿಂದ ಬಂಧಿಸಿತ್ತು. ಇದಾದ ನಂತರ, ರೈಲ್ವೆ ರಕ್ಷಣಾ ಪಡೆಯು ಕನೋಜಿಯಾನನ್ನು ಬಿಡುಗಡೆಗೊಳಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಆಕಾಶ್ ಕನೋಜಿಯ, “ಮಾಧ್ಯಮಗಳು ನನ್ನ ಚಿತ್ರವನ್ನು ತೋರಿಸುತ್ತಿದ್ದಂತೆಯೆ ನನ್ನ ಕುಟುಂಬ ಆಘಾತಗೊಂಡು ಕಣ್ಣೀರಾಯಿತು. ಈ ಪ್ರಕರಣದಲ್ಲಿ ನಾನೇ ಪ್ರಮುಖ ಶಂಕಿತ ಆರೋಪಿ ಎಂದೂ ಮಾಧ್ಯಮಗಳು ಪ್ರಸಾರ ಮಾಡಿದವು. ಮುಂಬೈ ಪೊಲೀಸರ ಈ ಒಂದು ತಪ್ಪು ನನ್ನ ಜೀವನವನ್ನೇ ಹಾಳು ಮಾಡಿತು. ಅವರು ನನಗೆ ಮೀಸೆಯಿದೆ ಹಾಗೂ ನಟ ಸೈಫ್ ಅಲಿ ಖಾನ್ ನಿವಾಸದ ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿಗೆ ಮೀಸೆ ಇಲ್ಲ ಎಂಬುದನ್ನು ಗುರುತಿಸುವಲ್ಲಿ ಅವರು ವಿಫಲರಾದರು” ಎಂದು ಅಳಲು ತೋಡಿಕೊಂಡಿದ್ದಾರೆ.
“ಈ ಘಟನೆಯ ನಂತರ, ನನಗೆ ಕರೆ ಮಾಡಿದ ಪೊಲೀಸರು ಆ ವ್ಯಕ್ತಿ ನೀನೇನಾ ಎಂದು ಪ್ರಶ್ನಿಸಿದರು. ಆಗ ನಾನು ನನ್ನನ ಮನೆಯಲ್ಲಿದ್ದೆ ಎಂದು ಎಂದು ಹೇಳಿದಾಗ ಆ ಕರೆ ಕಟ್ ಆಯಿತು. ನಾನು ನನ್ನ ಭಾವಿ ವಧುವನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ನನ್ನನ್ನು ದುರ್ಗ್ ನಲ್ಲಿ ವಶಕ್ಕೆ ಪಡೆಯಲಾಯಿತು ಹಾಗೂ ನನ್ನನ್ನು ರಾಯ್ಪುರಕ್ಕೆ ಕರೆದೊಯ್ಯಲಾಯಿತು. ಅಲ್ಲಿಗೆ ತಲುಪಿದ ಮುಂಬೈ ಪೊಲೀಸರು ನನ್ನ ಮೇಲೆ ಹಲ್ಲೆಯನ್ನೂ ನಡೆಸಿದರು” ಎಂದು ಅವರು ಆರೋಪಿಸಿದ್ದಾರೆ.
ನನ್ನನ್ನು ಬಿಡುಗಡೆಗೊಳಿಸಿದ ನಂತರ, ನನ್ನ ತಾಯಿ ನನಗೆ ಮನೆಗೆ ಬಂದುಬಿಡುವಂತೆ ಸೂಚಿಸಿದರು. ಆದರೆ, ಅಲ್ಲಿಂದ ನನ್ನ ಬದುಕು ಹಳ್ಳ ಹಿಡಿಯಲು ಪ್ರಾರಂಭಿಸಿತು.
“ನಾನು ನನ್ನ ಮಾಲಕನಿಗೆ ಕರೆ ಮಾಡಿದಾಗ, ಆತ ಕೆಲಸಕ್ಕೆ ಬರಬೇಡ ಎಂದು ಸೂಚಿಸಿದರು. ಅವರು ನನ್ನ ವಿವರಣೆಗಳನ್ನು ಕೇಳಲು ನಿರಾಕರಿಸಿದರು. ನನ್ನನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ನನ್ನ ಭಾವಿ ವಧುವಿನ ಕಡೆಯುವರು ಮದುವೆಯ ಮಾತುಕತೆಯನ್ನು ಮುಂದುವರಿಸಲು ನಿರಾಕರಿಸಿದ್ದಾರೆ ಎಂದು ನನ್ನ ಅಜ್ಜಿ ನನ್ನ ಕುಟುಂಬಕ್ಕೆ ತಿಳಿಸಿದರು” ಎಂದು ಅವರು ಹೇಳಿದ್ದಾರೆ.
ಸುದೀರ್ಘ ವೈದ್ಯಕೀಯ ಚಿಕಿತ್ಸೆಯ ನಂತರ ನನ್ನ ಸಹೋದರ ಮೃತಪಟ್ಟ. ಇದರಿಂದಾಗಿ ನಾವು ನಮ್ಮ ಐಶಾರಾಮಿ ಮನೆಯನ್ನು ಮಾರಾಟ ಮಾಡಿ, ಕಫೆ ಪರೇಡ್ ನಲ್ಲಿರುವ ಸಾಧಾರಣ ಮನೆಯೊಂದಕ್ಕೆ ಸ್ಥಳಾಂತಗೊಳ್ಳಬೇಕಾಯಿತು ಎಂದು ಕನೋಜಿಯ ತಿಳಿಸಿದ್ದಾರೆ.
“ನನ್ನ ವಿರುದ್ಧ ಕಫೆ ಪರೇಡ್ ಹಾಗೂ ಗುರ್ಗಾಂವ್ ನಲ್ಲಿ ಎರಡು ಪ್ರಕರಣಗಳಿವೆ. ಹಾಗಂತ, ನನ್ನನ್ನು ಈ ರೀತಿ ಶಂಕಿತ ಆರೋಪಿಯನ್ನಾಗಿಸಿ, ನನ್ನನ್ನು ಸಂಕಷ್ಟಕ್ಕೆ ದೂಡಬಾರದಿತ್ತು. ನಾನು ನನ್ನ ಕೆಲಸ ಕಳೆದುಕೊಂಡಿರುವುದರಿಂದ, ಸೈಫ್ ಅಲಿ ಖಾನ್ ನಿವಾಸದೆದುರು ನಿಂತು, ಅವರ ಬಳಿ ಕೆಲಸ ಕೇಳಲು ಯೋಜಿಸುತ್ತಿದ್ದೇನೆ” ಎಂದೂ ಕನೋಜಿಯ ಹೇಳಿದ್ದಾರೆ.
ಜನವರಿ 16ರಂದು ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ರ 12ನೇ ಮಹಡಿಯ ಐಶಾರಾಮಿ ನಿವಾಸಕ್ಕೆ ದರೋಡೆ ಮಾಡಲೆಂದು ನುಗ್ಗಿದ್ದ ನುಸುಳುಕೋರನೊಬ್ಬ, ಅವರಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದ. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 54 ವರ್ಷದ ಸೈಫ್ ಅಲಿ ಖಾನ್, ಶಸ್ತ್ರಚಿಕಿತ್ಸೆಗೊಳಗಾಗಿ, ಸದ್ಯ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.







