‘ಐ ಲವ್ ಯೂ’ಹೇಳಿದರೆ ಲೈಂಗಿಕ ಉದ್ದೇಶ ಎಂದರ್ಥವಲ್ಲ: ಮುಂಬೈ ಹೈಕೋರ್ಟ್

ಮುಂಬೈ ಹೈಕೋರ್ಟ್ | PTI
ಮುಂಬೈ: ‘ಐ ಲವ್ ಯೂ’ ಎಂದು ಹೇಳುವುದು ಭಾವನೆಗಳ ಅಭಿವ್ಯಕ್ತಿ ಮಾತ್ರ ಹಾಗೂ ಅದರಲ್ಲಿ ‘‘ಲೈಂಗಿಕ ಉದ್ದೇಶ’’ ಇದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ನ ನಾಗಪುರ ಪೀಠ ಅಭಿಪ್ರಾಯಪಟ್ಟಿದೆ. ಹದಿಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ 35 ವರ್ಷದ ವ್ಯಕ್ತಿಯೊಬ್ಬನನ್ನು ದೋಷಮುಕ್ತಗೊಳಿಸಿದೆ.
‘‘ಅನುಚಿತವಾಗಿ ಸ್ಪರ್ಶಿಸುವುದು, ಬಲವಂತವಾಗಿ ಬಟ್ಟೆ ಬಿಚ್ಚುವುದು, ಅಶ್ಲೀಲ ಸಂಜ್ಞೆಗಳು ಅಥವಾ ಮಹಿಳೆಯ ಮರ್ಯಾದೆಗೆ ಭಂಗ ತರುವ ಉದ್ದೇಶದಿಂದ ಆಡಲಾಗುವ ಮಾತುಗಳಲ್ಲಿ ಲೈಂಗಿಕ ಉದ್ದೇಶ ಇರುತ್ತದೆ’’ ಎಂದು ನ್ಯಾಯಮೂರ್ತಿ ಉರ್ಮಿಳಾ ಜೋಶಿ ಫಲ್ಕೆ ಅವರನ್ನೊಳಗೊಂಡ ನ್ಯಾಯಪೀಠವೊಂದು ಸೋಮವಾರ ನೀಡಿದ ಆದೇಶದಲ್ಲಿ ಹೇಳಿದೆ.
2015ರಲ್ಲಿ, ಆರೋಪಿಯು ನಾಗಪುರದಲ್ಲಿ 17 ವರ್ಷದ ಬಾಲಕಿಯ ಹಿಂದೆ ಹೋಗಿ, ಕೈ ಹಿಡಿದು, ‘ಐ ಲವ್ ಯೂ’ ಎಂದು ಹೇಳಿದ ಎಂಬುದಾಗಿ ಆರೋಪಿಸಲಾಗಿತ್ತು.
2017ರಲ್ಲಿ, ನಾಗಪುರದ ಸೆಶನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಆರೋಪಿಯನ್ನು ದೋಷಿ ಎಂಬುದಾಗಿ ಘೋಷಿಸಿತ್ತು ಹಾಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಹೈಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿದೆ. ಆರೋಪಿಯ ನೈಜ ಉದ್ದೇಶ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಏರ್ಪಡಿಸುವುದಾಗಿತ್ತು ಎನ್ನುವುದನ್ನು ಸೂಚಿಸುವ ಸನ್ನಿವೇಶಗಳು ಅಲ್ಲಿರಲಿಲ್ಲ ಎಂದು ಅದು ಹೇಳಿದೆ.
‘‘‘ಐ ಲವ್ ಯೂ’ ಎಂಬ ಪದಗಳು, ಶಾಸಕಾಂಗ ಅರ್ಥಮಾಡಿಕೊಂಡಿರುವಂತೆ, ಅವುಗಳಷ್ಟಕ್ಕೇ ಯಾವುದೇ ಲೈಂಗಿಕ ಉದ್ದೇಶವನ್ನು ಹೊಂದಿಲ್ಲ’’ ಎಂದು ನ್ಯಾಯಾಲಯ ಹೇಳಿತು.







