ಮುಂಬೈ: ಕೀನ್ಯಾ ಮಹಿಳೆಯ ಬಂಧನ, 15 ಕೋಟಿ ರೂ. ಮೌಲ್ಯದ ಕೊಕೇನ್ ವಶ

ಸಾಂದರ್ಭಿಕ ಚಿತ್ರ
ಮುಂಬೈ: ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ (DRI)ದ ಅಧಿಕಾರಿಗಳು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೀನ್ಯಾದ ಮಹಿಳೆಯೋರ್ವರನ್ನು ಗುರುವಾರ ಬಂಧಿಸಿದ್ದಾರೆ ಹಾಗೂ ಆಕೆಯಿಂದ 15 ಕೋಟಿ ರೂ. ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಈ ಕೊಕೇನ್ ಅನ್ನು ಮಹಿಳೆ ತನ್ನ ಬ್ಯಾಗ್ ಗಳಲ್ಲಿದ್ದ ಹೇರ್ ಕಂಡಿಷನರ್ ಹಾಗೂ ಬಾಡಿ ವಾಶ್ ಬಾಟಲಿಗಳಲ್ಲಿ ಅಡಗಿಸಿ ಇರಿಸಿದ್ದಳು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನಿರ್ದಿಷ್ಟ ಬೇಹುಗಾರಿಕೆ ಮಾಹಿತಿಯ ಆಧಾರದಲ್ಲಿ ಡಿಆರ್ಐ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ನೈರೋಬಿಯಿಂದ ಆಗಮಿಸಿದ ಮಹಿಳೆಯನ್ನು ಬಂಧಿಸಿದರು. ಆಕೆಯ ಬ್ಯಾಗ್ ಗಳನ್ನು ತಪಾಸಣೆ ನಡೆಸಿದಾಗ ಹೇರ್ ಕಂಡೀಷನರ್ ಹಾಗೂ ಬಾಡಿ ವಾಶ್ ಬಾಟಲಿಗಳಲ್ಲಿ ಬಿಳಿಯ ಹುಡಿಯನ್ನು ಒಳಗೊಂಡ ಎರಡು ಪ್ಯಾಕೇಟ್ ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ.
ಪರಿಶೀಲನೆ ಬಳಿಕ ಈ ಬಿಳಿ ಹುಡಿ ಕೊಕೇನ್ ಎಂದು ದೃಢಪಟ್ಟಿತು. ಈ ಬಾಟಲಿಗಳಲ್ಲಿ 14.9 ಕೋಟಿ ರೂ. ಮೌಲ್ಯದ 1,490 ಗ್ರಾಂ ಕೊಕೇನ್ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.





