ಹಿಂದಿ ಹೇರಿಕೆ ಯತ್ನ ಮಹಾರಾಷ್ಟ್ರದಿಂದ ಮುಂಬೈ ಬೇರ್ಪಡಿಸುವ ಸಂಚಿನ ಭಾಗ: ರಾಜ್ ಠಾಕ್ರೆ
ವಿಜಯೋತ್ಸವ ರ್ಯಾಲಿಯಲ್ಲಿ ಎರಡು ದಶಕಗಳ ಬಳಿಕ ಉದ್ಧವ್ ಜೊತೆ ವೇದಿಕೆ ಹಂಚಿಕೊಂಡ ಎಂಎನ್ಎಸ್ ನಾಯಕ

Photo credit: PTI
ಮುಂಬೈ,ಜು.5: ದೇವೇಂದ್ರ ಫಡ್ನವೀಸ್ ಸರಕಾರವು ರಾಜ್ಯದಲ್ಲಿ ಹೇರಲು ಯತ್ನಿಸಿದ ತ್ರಿಭಾಷಾ ಸೂತ್ರವು, ಮಹಾರಾಷ್ಟ್ರವನ್ನು ಮುಂಬೈನಿಂದ ಬೇರ್ಪಡಿಸುವ ಯೋಜನೆಯ ಪೂರ್ವಭಾವಿ ಕ್ರಮವಾಗಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸಮಿತಿ(ಎಂಎನ್ಎಸ್)ಯ ವರಿಷ್ಠ ರಾಜ್ ಠಾಕ್ರೆ ಹೇಳಿದ್ದಾರೆ.
ತನ್ನ ಸೋದರಸಂಬಂಧಿ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಮೊದಲ ಬಾರಿಗೆ ರಾಜಕೀಯ ವೇದಿಕೆಯನ್ನು ಹಂಚಿಕೊಂಡ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಮುಂಬೈಯಲ್ಲಿ ಶನಿವಾರ ನಡೆದ ವಿಜಯೋತ್ಸವ ರ್ಯಾಲಿಯಲ್ಲಿ ಮಾತನಾಡಿದ ಅವರು, ತನ್ನನ್ನು ಹಾಗೂ ಉದ್ಧವ್ ಠಾಕ್ರೆಯನ್ನು ಒಂದುಗೂಡಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಂದೆ ಸಾಧ್ಯವಾಗಿದೆ ಎಂದರು. ಈ ಕಾರ್ಯವು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರಿಗೂ ಸಾಧ್ಯವಾಗಿರಲಿಲ್ಲ ಎಂದು ರಾಜ್ ಠಾಕ್ರೆ ತಿಳಿಹಾಸ್ಯದ ಧಾಟಿಯಲ್ಲಿ ಹೇಳಿದರು.
ಎರಡು ದಶಕಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಂದೇ ವೇದಿಕೆಯನ್ನು ಹಂಚಿಕೊಂಡ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ‘ಆವಾಜ್ ಮರಾಠೀಚಾ’ ವಿಜಯೋತ್ಸವ ಸಭೆಯಲ್ಲಿ ಮಾತನಾಡುತ್ತಿದ್ದರು. ರಾಜ್ಯದ ಶಾಲೆಗಳಲ್ಲಿ 1ನೇ ತರಗತಿಯಿಂದ ತೃತೀಯ ಭಾಷೆಯಾಗಿ ಹಿಂದಿಯನ್ನು ಜಾರಿಗೊಳಿಸುವ ಕುರಿತಾದ ಎರಡು ಆದೇಶಗಳನ್ನು ದೇವೇಂದ್ರ ಫಡ್ನವೀಸ್ ಸರಕಾರ ಹಿಂದೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ವಿಜಯೋತ್ಸವವನ್ನು ಆಚರಿಸಲಾಗಿದೆ.
‘‘ಮರಾಠಿ ಜನತೆ ಪ್ರದರ್ಶಿಸಿದ ಬಲವಾದ ಏಕತೆಯಿಂದಾಗಿ ಮಹಾರಾಷ್ಟ್ರ ಸರಕಾರವು ತ್ರಿಭಾಷಾ ಸೂತ್ರವನ್ನು ಹೇರುವ ನಿರ್ಧಾರವನ್ನು ಹಿಂಪಡೆದುಕೊಂಡಿತು. ಹಿಂದಿ ಹೇರಿಕೆಯ ನಿರ್ಧಾರವು ಮುಂಬೈಯನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸುವ ಪೂರ್ವಭಾವಿ ಯೋಜನೆಯಾಗಿತ್ತು ’’ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.