ಮುಂಬೈ ಪಾಲಿಕೆ ಚುನಾವಣೆ| ಬಿಜೆಪಿಯನ್ನು ಕಡೆಗಣಿಸಿ ನವಾಬ್ ಮಲಿಕ್ ಕುಟುಂಬಕ್ಕೆ 3 ಟಿಕೆಟ್ಗಳನ್ನು ನೀಡಿದ ಅಜಿತ್ ಪವಾರ್

ಅಜಿತ್ ಪವಾರ್ , ನವಾಬ್ ಮಲಿಕ್ | Photo Credit : PTI
ಮುಂಬೈ,ಡಿ.29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ನವಾಬ್ ಮಲಿಕ್ ಅವರ ಕುಟುಂಬದ ಮೂವರಿಗೆ ಟಿಕೆಟ್ಗಳನ್ನು ನೀಡಿದ್ದಾರೆ. ಇದು ಮಿತ್ರಪಕ್ಷ ಬಿಜೆಪಿಗೆ ಮುಜುಗರವನ್ನುಂಟು ಮಾಡಿರುವಂತಿದೆ.
ಪವಾರ್ ಮಲಿಕ್ರನ್ನು ಎನ್ಸಿಪಿಯ ಮುಂಬೈ ಚುನಾವಣೆ ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದರು.
ಭೂಗತ ಪಾತಕಿ ದಾವೂದ್ ಇಬ್ರಾಹಿಮ್ನ ಸಂಬಂಧಿಕರು ಮತ್ತು ಸಹಾಯಕರೊಂದಿಗೆ ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಕರಣಗಳ ಹಿನ್ನೆಲೆಯಲ್ಲಿ ಬಿಜೆಪಿ ಮಲಿಕ್ ಅವರ ಹೆಸರಿಗೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು.
ಮಲಿಕ್ ಪುತ್ರಿ ಸನಾ ಮಲಿಕ್ ಅಣುಶಕ್ತಿ ನಗರದ ಎನ್ಸಿಪಿ ಶಾಸಕಿಯಾಗಿದ್ದಾರೆ.
ಬಿಎಂಸಿ 227 ವಾರ್ಡ್ಗಳನ್ನು ಹೊಂದಿದೆ. ಮಹಾಯುತಿ-ಎನ್ಸಿಪಿ ಸರಕಾರವನ್ನು ಮುನ್ನಡೆಸುತ್ತಿರುವ ಬಿಜೆಪಿಯು ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಹಾಗೂ ರಾಮದಾಸ ಆಠವಳೆ ನೇತೃತ್ವದ ಆರ್ಪಿಐ(ಆಠವಳೆ)ನಂತಹ ಇತರ ಪಕ್ಷಗಳ ಮೈತ್ರಿಯೊಂದಿಗೆ ಬಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು,ಎನ್ಸಿಪಿಯನ್ನು ದೂರವಿಟ್ಟಿದೆ.
ಎನ್ಸಿಪಿ ಮುಂಬೈನಲ್ಲಿ 100ಕ್ಕೂ ಅಧಿಕ ಸ್ಥಾನಗಳಿಗೆ ಸ್ಪರ್ಧಿಸುವ ಸಾಧ್ಯತೆಯಿದ್ದು,ರವಿವಾರ ರಾತ್ರಿ 37 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಪಟ್ಟಿಯಲ್ಲಿ ಮಲಿಕ್ ಅವರ ಸೋದರ ಕಪ್ತಾನ್ ಮಲಿಕ್, ಸೋದರಿ ಡಾ.ಸಯೀದಾ ಮಲಿಕ್ ಮತ್ತು ಸೋದರ ಸೊಸೆ ಬುಷ್ರಾ ಮಲಿಕ್ ಅವರ ಹೆಸರುಗಳಿವೆ.
ಮಲಿಕ್ ಕುಟುಂಬವು ಕುರ್ಲಾ-ಅಣುಶಕ್ತಿ ನಗರ ಪ್ರದೇಶದಲ್ಲಿ ಪ್ರಭಾವವನ್ನು ಹೊಂದಿದೆ. ಪಾಕಿಸ್ತಾನದಲ್ಲಿ ನೆಲೆಸಿರುವ 1993 ಮುಂಬೈ ಸರಣಿ ಸ್ಫೋಟಗಳ ರೂವಾರಿ ದಾವೂದ್ ಇಬ್ರಾಹಿಮ್ನ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಈ.ಡಿ) 23,ಫೆ.2022ರಂದು ಮಲಿಕ್ರನ್ನು ಬಂಧಿಸಿತ್ತು. ಎನ್ಸಿಪಿಯ ಮಾಜಿ ಮುಖ್ಯ ವಕ್ತಾರರಾಗಿರುವ ಮಲಿಕ್ ಸದ್ಯ ಸುಪ್ರೀಂ ಕೋರ್ಟ್ನಿಂದ ಜಾಮೀನಿನಲ್ಲಿ ಹೊರಗಿದ್ದಾರೆ.







