ಮರಾಠ ಮೀಸಲಾತಿ ಹೋರಾಟ: ಮತ್ತೊಂದು ದಿನದ ಅನುಮತಿ ನೀಡಿದ ಮುಂಬೈ ಪೊಲೀಸರು

PC : PTI
ಮುಂಬೈ: ದಕ್ಷಿಣ ಮುಂಬೈನ ಆಝಾದಿ ಮೈದಾನದಲ್ಲಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ನಡೆಸುತ್ತಿರುವ ಹೋರಾಟಕ್ಕೆ ನೀಡಿದ್ದ ಅನುಮತಿಯನ್ನು ಶನಿವಾರ ಮುಂಬೈ ಪೊಲೀಸರು ಇನ್ನೂ ಒಂದು ದಿನ ವಿಸ್ತರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮರಾಠಿ ಮೀಸಲಾತಿ ಹೋರಾಟದ ಸಂಘಟಕರಿಗೆ ಕಳೆದೆರಡು ದಿನಗಳಲ್ಲಿ ಮುಂಬೈ ಪೊಲೀಸರು ಎರಡನೆಯ ಬಾರಿ ತಮ್ಮ ಅನುಮತಿ ವಿಸ್ತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಶನಿವಾರ ಬೆಳಗ್ಗೆ ಆಝಾದ್ ಮೈದಾನದಲ್ಲಿ ಹೋರಾಟ ನಡೆಸಲು ಜರಾಂಗೆಗೆ ಮತ್ತೊಂದು ದಿನ ಅವಕಾಶ ನೀಡಬೇಕು ಎಂಬ ಅರ್ಜಿಯನ್ನು ಆಝಾದ್ ಮೈದಾನ್ ಪೊಲೀಸರು ಸ್ವೀಕರಿಸಿದರು. ಈ ಹೋರಾಟದ ಮುಕ್ತಾಯಕ್ಕೆ ಶನಿವಾರ ಸಂಜೆ 6 ಗಂಟೆ ಅಂತಿಮ ಗಡುವಾಗಿತ್ತು.
ಆದರೆ, ಅರ್ಜಿಯನ್ನು ಆಧರಿಸಿ ಆಝಾದ್ ಮೈದಾನದಲ್ಲಿ ಜರಾಂಗೆ ನಡೆಸುತ್ತಿರುವ ಪ್ರತಿಭಟನೆಗೆ ಇನ್ನೂ ಒಂದು ದಿನ ಅನುಮತಿಯನ್ನು ವಿಸ್ತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜರಾಂಗೆಯ ಸಾವಿರಾರು ಬೆಂಬಲಿಗರು ರಸ್ತೆಗಿಳಿದಿದ್ದರಿಂದ, ದಕ್ಷಿಣ ಮುಂಬೈನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಅದರಲ್ಲೂ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಬಳಿಯ ಸಂಚಾರ ಅಕ್ಷರಶಃ ಆಮೆಗತಿಯಲ್ಲಿತ್ತು.
ಕೃಷಿಕ ಸಮುದಾಯವಾದ ಕುಣಬಿಯನ್ನು ಇತರೆ ಹಿಂದುಳಿದ ವರ್ಗಗಳಿಗೆ ಸೇರ್ಪಡೆ ಮಾಡಬೇಕು ಎಂದು ಮರಾಠಿ ಮೀಸಲಾತಿ ಹೋರಾಟಗಾರರು ಆಗ್ರಹಿಸುತ್ತಾ ಬಂದಿದ್ದಾರೆ. ಕುಣಬಿ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳಿಗೆ ಸೇರ್ಪಡೆ ಮಾಡುವುದರಿಂದ, ಆ ಸಮುದಾಯಕ್ಕೆ ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಪ್ರಾಪ್ತವಾಗಲಿದೆ.







