ಮುಂಬೈನಲ್ಲಿ ಮಹಾ ಮಳೆ: ಶತಮಾನದ ದಾಖಲೆ ಮುರಿದ ವರ್ಷಧಾರೆ

PC | PTI
ಮುಂಬೈ: ನಿರೀಕ್ಷೆಗಿಂತ ಮುಂಚಿತವಾಗಿಯೇ ಸೋಮವಾರ ನೈರುತ್ಯ ಮಾನ್ಸೂನ್ ಮುಂಬೈ ನಗರಕ್ಕೆ ಕಾಲಿಟ್ಟಿದ್ದು, ಭಾರಿ ವರ್ಷಧಾರೆಯೊಂದಿಗೆ ಸುಮಾರು ಒಂದು ಶತಮಾನಕ್ಕೂ ಹೆಚ್ಚು ಹಿಂದಿನ ದಾಖಲೆಯನ್ನು ಪುಡಿಗಟ್ಟಿದೆ. ಇದರಿಂದಾಗಿ ರಾಷ್ಟ್ರದ ಆರ್ಥಿಕ ರಾಜಧಾನಿಯೂ ಆದ ಮುಂಬೈನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಸ್ತೆ, ರೈಲು ಹಾಗೂ ವಿಮಾನ ಸೇವೆಗಳು ವ್ಯತ್ಯಯಗೊಂಡಿವೆ.
ಮುಂಬೈನ ಕೂಡು ರಸ್ತೆಗಳೆಲ್ಲ ಮುಳುಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದ ತೀವ್ರವಾಗಿ ಬಾಧಿತವಾಗಿರುವ ಅವಳಿ ನಗರಗಳಾದ ಮುಂಬೈ ನಗರ ಹಾಗೂ ಮುಂಬೈ ಉಪ ನಗರದ ಹಲವು ಸ್ಥಳಗಳಲ್ಲಿ ಮೊಣಕಾಲು ಹಾಗೂ ಪೃಷ್ಠ ಮಟ್ಟದ ನೀರಿನಲ್ಲಿ ಜನರು ಹರಸಾಹಸ ಪಡುತ್ತಾ ಸಾಗುತ್ತಿರುವುದು ಸೆರೆಯಾಗಿದೆ.
ಈ ಮಹಾ ಮಳೆ ಸೃಷ್ಟಿಸಿರುವ ಅನಾಹುತದಿಂದಾಗಿ, ಮಹಾರಾಷ್ಟ್ರ ಸರಕಾರ ಹಾಗೂ ಮಹಾರಾಷ್ಟ್ರದ ಅತ್ಯಂತ ಬೃಹತ್ ಮತ್ತು ಶ್ರೀಮಂತ ಸ್ಥಳೀಯ ಸಂಸ್ಥೆಯಾದ ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಮುಂಬೈ ನಿವಾಸಿಗಳ ತೀವ್ರ ಟೀಕೆಗೆ ಗುರಿಯಾಗಿವೆ.
ಮಹಾರಾಷ್ಟ್ರದಲ್ಲಿನ ದಶಕಗಳ ಕಾಲದ ಮಳೆಯ ದಾಖಲೆಗಳನ್ನು ಪರಿಶೀಲಿಸಿದರೆ, ಜೂನ್ 5ರಂದು ಮಹಾರಾಷ್ಟ್ರ ಹಾಗೂ ಜೂನ್ 11ರಂದು ಮುಂಬೈ ಅನ್ನು ಮಾನ್ಸೂನ್ ಮಾರುತಗಳು ಪ್ರವೇಶಿಸುವುದು ವಾಡಿಕೆಯಾಗಿದೆ. ಆದರೆ, 16 ದಿನ ಮುಂಚಿತವಾಗಿಯೇ, ಮೇ 26ರಂದು ಮಾನ್ಸೂನ್ ಮಾರುತಗಳು ಮುಂಬೈ ಅನ್ನು ಪ್ರವೇಶಿಸಿರುವುದು ಸಂಪೂರ್ಣವಾಗಿ ಅನಿರೀಕ್ಷಿತವಾಗಿದ್ದು, ಇದರಿಂದಾಗಿ ಆಡಳಿತ ಯಂತ್ರ ಕೂಡಾ ದಿಕ್ಕುತೋಚದಂತಾಗಿದೆ.
ದಾಖಲೆಗಳ ಪ್ರಕಾರ, 1956, 1962 ಹಾಗೂ 1971ರಲ್ಲಿ ಮೇ 29ರಂದು, 1990 ಹಾಗೂ 2006ರಲ್ಲಿ ಮೇ 31ರಂದು ವಾರ್ಷಿಕ ಮಾನ್ಸೂನ್ ಮಾರುತಗಳು ಮುಂಬೈ ಅನ್ನು ಪ್ರವೇಶಿಸಿದ್ದವು.







