2006ರ ಮುಂಬೈ ಸರಣಿ ರೈಲು ಸ್ಪೋಟ ಪ್ರಕರಣದ ದೋಷಮುಕ್ತನಿಂದ 9 ಕೋಟಿ ರೂ. ಪರಿಹಾರಕ್ಕಾಗಿ ಆಗ್ರಹ

PC : PTI
ಮುಂಬೈ,ಸೆ.12:, ತನ್ನನ್ನು ಅನ್ಯಾಯವಾಗಿ 9 ವರ್ಷಗಳ ಕಾಲ ಜೈಲು ವಾಸ ಅನುಭವಿಸುವಂತೆ ಮಾಡಿದ್ದಕ್ಕಾಗಿ ಹಾಗೂ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಕ್ಕಾಗಿ 9 ಕೋಟಿ ರೂ. ಪರಿಹಾರ ನೀಡಬೇಕೆಂದು, 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿ, 2015ರಲ್ಲಿ ದೋಷಮುಕ್ತಗೊಂಡ ವಾಹಿದ್ ಶೇಖ್ ಆಗ್ರಹಿಸಿದ್ದಾರೆ.
ವಾಹಿದ್ ಶೇಖ್ ಅವರು ಈ ಬಗ್ಗೆ ಶುಕ್ರವಾರ ಬಹಿರಂಗ ಪತ್ರವೊಂದನ್ನು ಬರೆದಿದ್ದು ತನಗೆ ಹಾಗೂ ತನ್ನ ಕುಟುಂಬಕ್ಕೆ ತೀವ್ರ ಅನ್ಯಾಯವಾಗಿರುವುದಕ್ಕಾಗಿ ಹಾಗೂ ಉತ್ತರದಾಯಿತ್ವದೆಡೆಗೆ ಹೆಜ್ಜೆಯಾಗಿ ತನಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
‘‘ನಾನು ಜೈಲಿನಿಂದ ಹೊರಬಂದಿದ್ದೇನೆ, ಆದರೆ ನಾನು ಕಳೆದುಕೊಂಡ ವರ್ಷಗಳು, ಎದುರಿಸಿದ ಅಪಮಾನ ಮತ್ತು ನನ್ನ ಕುಟುಂಬ ಅನುಭವಿಸಿದ ಯಾತನೆಯನ್ನು ಅಳಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
ಕಸ್ಟಡಿಯಲ್ಲಿ ತನಗೆ ಚಿತ್ರಹಿಂಸೆ ನೀಡಲಾಗಿದ್ದು, ಇದರಿಂದಾಗಿ ತನಗೆ ಗ್ಲುಕೋಮಾ ಹಾಗೂ ದೀರ್ಘಕಾಲಿನ ನೋವು ಸೇರಿದಂತೆ ಶಾಶ್ವತವಾದ ಆರೋಗ್ಯ ಸಮಸ್ಯೆಗಳುಂಟಾಗಿವೆ ಎಂದು ವಾಹಿದ್ ಹೇಳಿದ್ದಾರೆ.
ನಾನು ಜೈಲಿನಲ್ಲಿದ್ದಾಗ ನನ್ನ ತಂದೆ ನಿಧನರಾದರು. ನನ್ನ ತಾಯಿ ಮಾನಸಿಕ ಆರೋಗ್ಯ ಕುಸಿದುಬಿತ್ತು ಮತ್ತು ನನ್ನ ಪತ್ನಿಯು ಏಕಾಂಗಿಯಾಗಿಯೇ ಕಷ್ಟಪಟ್ಟು ನಮ್ಮ ಮಕ್ಕಳನ್ನು ಬೆಳೆಸಿದ್ದಳು.ತನ್ನ ವೃತ್ತಿಜೀವನ ಹಾಗೂ ಶಿಕ್ಷಣ ಕೂಡಾ ಭಗ್ನಗೊಂಡಿದೆ. 30 ಲಕ್ಷ ರೂ.ಗೂ ಅಧಿಕ ಸಾಲವನ್ನು ಹೊಂದಿರುವುದಾಗಿ ಶೇಖ್ ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ತಾನು ಪರಿಹಾರಕ್ಕಾಗಿ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿಗಳ ಬಗ್ಗೆ ಹೆಚ್ಚು ಕ್ರೌರ್ಯದಿಂದ ವರ್ತಿಸುವ ಸಾಧ್ಯತೆಯಿದೆ ಎಂದು ಶೇಖ್ ಆತಂಕ ವ್ಯಕ್ತಪಡಿಸಿದ್ದಾರೆ.







