ವಾಯುಮಾಲಿನ್ಯಕ್ಕೆ ಮುಂಬೈ ಕಂಗಾಲು!

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ನ.27: ರಾಷ್ಟ್ರ ರಾಜಧಾನಿ ದಿಲ್ಲಿ ಬಳಿಕ ವಾಣಿಜ್ಯ ರಾಜಧಾನಿ ಮುಂಬೈನಲ್ಲಿಯೂ ವಾಯು ಗುಣಮಟ್ಟ ಹದೆಗಟ್ಟಿದ್ದು, ಮಹಾನಗರದ ನಿವಾಸಿಗಳ ಆರೋಗ್ಯದ ಬಗ್ಗೆ ಆತಂಕವನ್ನು ಮೂಡಿಸಿದೆ. ಗುರುವಾರ ಬೆಳಗ್ಗೆ ನಗರದ ವಿವಿಧೆಡೆ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮಾಪಕವು 182ಕ್ಕೆ ತಲುಪಿದ್ದು, ಕಳಪೆ ಶ್ರೇಣಿಗೆ ಸನ್ನಿಹಿತವಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಕಾರ ಕಳೆದ 24 ತಾಸುಗಳಲ್ಲಿ ಮುಂಬೈನ ವಾಯುಗುಣಮಟ್ಟ ಸೂಚ್ಯಂಕವು ‘ಸಾಧಾರಣ’ದ ಶ್ರೇಣಿಯಲ್ಲಿದ್ದು 182 ಅನ್ನು ತಲುಪಿದೆ. ವಾಯುಗುಣಮಟ್ಟ ಸೂಚ್ಯಂಕವು 200ಕ್ಕೆ ತಲುಪಿದಲ್ಲಿ , ಅದು ಕಳಪೆ ಶ್ರೇಣಿಗೆ ಸೇರ್ಪಡೆಯಾಗಲಿದೆ.
ಮುಂಬರುವ ದಿನಗಳಲ್ಲಿ ಮುಂಬೈನಲ್ಲಿ ವಾಯುಮಾಲಿನ್ಯವು ಇನ್ನಷ್ಟು ಹದಗೆಡಲಿದ್ದು, ನಿವಾಸಿಗಳು ಅದರಲ್ಲೂ ಅಸ್ತಮಾ ಮತ್ತಿತರ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿಕೂಲವಾದ ಆರೋಗ್ಯ ಪರಿಣಾಮಗಳನ್ನು ಎದುರಿಸುವ ಅಪಾಯವಿದೆ.
ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಮುಂಬೈನಲ್ಲಿ ವಾಯುಮಾಲಿನ್ಯ ಹದಗೆಟ್ಟಿರುವುದಕ್ಕಾಗಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳ ವಿರುದ್ಧ ಕಟುವಾದ ಟೀಕಾಪ್ರಹಾರ ಮಾಡಿದ್ದು , ಅವು ಪಾರಿಸಾರಿಕ ಕಾಳಜಿಯನ್ನು ನಿರ್ಲಕ್ಷಿಸಿವೆಯೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘‘ ಮುಂಬೈನ ವಾಯುಗುಣಮಟ್ಟ ಹದಗೆಡುತ್ತಿದೆ.ಇದೀಗ ವಾಯುಮಾಲಿನ್ಯದಲ್ಲಿ ಮುಂಬೈ, ದಿಲ್ಲಿಯ ಜೊತೆ ಸ್ಪರ್ಧೆಗಿಳಿದಿದೆ. ಪ್ರಸಕ್ತ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಆಡಳಿತದ ಸರಕಾರಗಳು ನಾಗರಿಕರ ಬವಣೆಯನ್ನು ನಿರ್ಲಕ್ಷಿಸುತ್ತಿವೆಯೆಂದು ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಸರಕಾರಗಳು ಸಾರ್ವಜನಿಕರ ಆರೋಗ್ಯಕ್ಕಿಂತ ಮಿಗಿಲಾಗಿ ಬಿಲ್ಡರ್ ಗಳು ಹಾಗೂ ಗುತ್ತಿಗೆದಾರರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕಟ್ಟಡ ನಿರ್ಮಾಣ,ನೆಲಸಮ ಕಾರ್ಯಾಚರಣೆಗಳು ಹಾಗೂ ಮರಕಡಿತದ ಚಟುವಟಿಕೆಗಳು ನಡೆಯುತ್ತಿವೆಯೆಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ ಸರಕಾರವು ಸಂಜಯ್ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ಅನಿಮಿಯತಗೊಳಿಸಿದ್ದು, ಅಭಿವೃದ್ಧಿ ಚಟುವಟಿಕೆಗಳಿಗಾಗಿ ತೆರದಿದೆ. ಇದರಿಂದ ಕೇವಲ ಬಿಲ್ಡರ್ ಗಳಿಗಷ್ಟೇ ಲಾಭವಾಗಲಿದೆ. ನಾಶಿಕ್ನಲ್ಲಿಯೂ ಸರಕಾರವು ಇಂತಹದೇ ಯೋಜನೆಯನ್ನು ಹಮ್ಮಿಕೊಂಡಿದೆಯೆಂದವರು ಆಪಾದಿಸಿದ್ದಾರೆ. ಅಧ್ಯಾತ್ಮಿಕವಾಗಿ ಹಾಗೂ ಪ್ರಾಕೃತಿಕವಾಗಿ ಮಹತ್ವದ್ದಾಗಿರುವ ತಪೋವನ ಅರಣ್ಯ ಪ್ರದೇಶವನ್ನು ನಾಶಪಡಿಸಲಾಗಿದೆ ಎಂದವರು ಹೇಳಿದ್ದಾರೆ.
ಅರಣ್ಯವನ್ನು ತೆರವುಗೊಳಿಸಿದ ಬಳಿಕ ಹಾಗೂ ಕುಂಭಮೇಳ ಕಾರ್ಯಕ್ರಮವು ಸಮಾರೋಪಗೊಂಡ ಬಳಿಕ ತಪೋವನ ಪ್ರದೇಶವನ್ನು ಅದಾನಿ ಗ್ರೂಪ್ಗೆ ಬಿಜೆಪಿ ಸರಕಾರ ಹಸ್ತಾಂತರಿಸಲಿದೆ ಎಂದು ಆದಿತ್ಯ ಠಾಕ್ರೆ ಹೇಳಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ಮಾಲಿನ್ಯಪೀಡಿತ ನಗರಗಳ ಪಟ್ಟಿಯಲ್ಲಿ ಭಾರತದ ಹಲವಾರು ನಗರಗಳು ಸ್ಥಾನಪಡೆದಿದ್ದು, ಪರಿಸ್ಥಿತಿ ಹೃದಯವಿದ್ರಾವಕವಾಗಿದೆ ಎಂದು ಅವರು ಎಕ್ಸ್ ನಲ್ಲಿ ಹೇಳಿದ್ದಾರೆ.







