ಮುಂಬೈ: ಮೊಸರು ಕುಡಿಕೆ ಉತ್ಸವದ ವೇಳೆ ಇಬ್ಬರು ಮೃತ್ಯು, 95 ಮಂದಿಗೆ ಗಾಯ

PC: TOI
ಮುಂಬೈ: ಮಹಾನಗರದಲ್ಲಿ ವ್ಯಾಪಕ ಮಳೆಯ ನಡುವೆಯೂ ಹಲವೆಡೆ ಗೋಕುಲಾಷ್ಟಮಿ ಪ್ರಯುಕ್ತ ಸಾಂಪ್ರದಾಯಿಕ ಮೊಸರು ಕುಡಿಕೆ ಉತ್ಸವ ನಡೆಯಿತು. ಆದರೆ ಮಾನವ ಪಿರಮಿಡ್ ನಿರ್ಮಿಸುವ ಉತ್ಸಾಹದ ಭರದಲ್ಲಿ 39 ವರ್ಷದ ಯುವಕ ಮತ್ತು 14 ವರ್ಷದ ಬಾಲಕ ಜೀವ ಕಳೆದುಕೊಂಡ ಧಾರುಣ ಘಟನೆ ವರದಿಯಾಗಿದೆ.
ನಗರದ ವಿವಿಧೆಡೆ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ 95 ಮಂದಿ ಗಾಯಗೊಂಡಿದ್ದಾರೆ. ಬಾಲಕ ಟೆಂಪೊದಲ್ಲಿ ಕುಳಿತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟರೆ, ಯುವಕ ಸ್ನೇಹಿತನ ಮನೆಯ ಬಾಲ್ಕನಿ ಕಿಟಕಿಗೆ ಹಗ್ಗದಿಂದ ಕಟ್ಟಿದ್ದ ಮೊಸರು ಕುಡಿಕೆ ಹಿಡಿಯುವ ಉತ್ಸಾಹದಲ್ಲಿ ಜಾರಿ ಬಿದ್ದು ಜೀವ ಕಳೆದುಕೊಂಡಿದ್ದಾರೆ. ರಾತ್ರಿ 9 ಗಂಟೆರವರೆಗೆ ಮಹಾನಗರ ಪಾಲಿಕೆ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ಲಭ್ಯವಾದ ಮಾಹಿತಿ ಪ್ರಕಾರ ಥಾಣೆಯಲ್ಲಿ 17 ಮಂದಿ ಗಾಯಗೊಂಡಿದ್ದು, ನವಿ ಮುಂಬೈನಲ್ಲಿ 6, ಕಲ್ಯಾಣ್- ಉಲ್ಲಾಸ್ ನಗರದಲ್ಲಿ ಐದು ಮಂದಿ ಗಾಯಗೊಂಡಿದ್ದು, ಒಟ್ಟು ಗಾಯಾಳುಗಳ ಸಂಖ್ಯೆ 123ಕ್ಕೇರಿದೆ.
ಒಂಬತ್ತು ವರ್ಷದ ಬಾಲಕ ಸೇರಿದಂತೆ ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದೇ ಮೊದಲ ಬಾರಿಗೆ 10 ಸ್ತರಗಳ ಮಾನವ ಪಿರಮಿಡ್ ಮೂರು ಬಾರಿ ನಿರ್ಮಿಸಲ್ಪಟ್ಟವು. ಸಚಿವ ಪ್ರತಾಪ್ ಸರನಾಯಕ ಥಾಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೋಗೇಶ್ವರಿಯ ಕೊಂಕಣ ನಗರ ಗೋವಿಂದ ತಂಡ 10 ಸ್ತರಗಳ ಪಿರಮಿಡ್ ರಚಿಸಿದ ಮೊದಲ ತಂಡ ಎನಿಸಿಕೊಂಡಿತು.





