ಕೇರಳ | ತರೂರ್ ರ ಮೋದಿ ಗುಣಗಾನ ಅಸಹ್ಯಕರ: ಕಾಂಗ್ರೆಸ್ ಹಿರಿಯ ನಾಯಕ ಮುರಳೀಧರನ್ ವಾಗ್ದಾಳಿ

Photos Credit: DH, PTI
ತಿರುವನಂತಪುರಂ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ಇದೇ ಪ್ರಥಮ ಬಾರಿಗೆ ಬಹಿರಂಗ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಮುರಳೀಧರನ್, ಈ ಹೇಳಿಕೆ ತೀರಾ ಅಸಹ್ಯಕರ ಎಂದು ಟೀಕಿಸಿದ್ದಾರೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮುರಳೀಧರನ್, ಚುನಾವಣಾ ಋತುವಿನಲ್ಲಿ ಪಕ್ಷದ ಕಾರ್ಯಕಾರಿಣಿ ಸಮಿತಿಯ ಸದಸ್ಯರೊಬ್ಬರು ಪಕ್ಷದ ಪ್ರತಿಸ್ಪರ್ಧಿಯನ್ನು ಹೊಗಳುವುದನ್ನು ಮಂದುವರಿಸುವುದರಿಂದ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಹೇಳಿದ್ದಾರೆ.
“ಅವರು ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದಾರೆ. ಕಾರ್ಯಕಾರಿಣಿ ಸಮಿತಿಯ ಸದಸ್ಯರೊಬ್ಬರು ಕಾಂಗ್ರೆಸ್ ಪಕ್ಷದ ಪ್ರತಿಸ್ಪರ್ಧಿಯನ್ನು ಹೊಗಳುವುದನ್ನು ಮುಂದುವರಿಸುವುದು ತೀರಾ ಅಸಹ್ಯಕರವಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ದಿನಪತ್ರಿಕೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೆಲಸ ಮಾಡುವ ಶಕ್ತಿ, ಚೈತನ್ಯ ಹಾಗೂ ಬಯಕೆಯನ್ನು ಪ್ರಶಂಸಿಸಿ ಶಶಿ ತರೂರ್ ಲೇಖನವೊಂದನ್ನು ಬರೆದ ಮರುದಿನವೇ ಈ ಹೇಳಿಕೆ ಹೊರ ಬಿದ್ದಿದೆ. “ಜಾಗತಿಕ ವೇದಿಕೆಯಲ್ಲಿ ನರೇಂದ್ರ ಮೋದಿ ಭಾರತದ ಪ್ರಮುಖ ಆಸ್ತಿಯಾಗಿದ್ದು, ಅವರು ದೊಡ್ಡ ಪ್ರಮಾಣದ ಬೆಂಬಲ ಹೊಂದುವ ಅರ್ಹತೆ ಹೊಂದಿದ್ದಾರೆ” ಎಂದು ಆ ಲೇಖನದಲ್ಲಿ ಪ್ರಶಂಸಿಸಲಾಗಿತ್ತು.