Uttarakhand | ತ್ರಿಪುರಾ ವಿದ್ಯಾರ್ಥಿಯ ಹತ್ಯೆ ಪ್ರಕರಣದ ತನಿಖೆಗೆ SIT ರಚನೆ

ಸಾಂದರ್ಭಿಕ ಚಿತ್ರ | Photo Credit : PTI
ಡೆಹ್ರಾಡೂನ್, ಡಿ.30: ತ್ರಿಪುರಾದ ವಿದ್ಯಾರ್ಥಿ ಆ್ಯಂಜೆಲ್ ಚಕ್ಮಾ ಹತ್ಯೆ ಪ್ರಕರಣದ ತನಿಖೆಗೆ ಉತ್ತರಾಖಂಡ ಪೊಲೀಸರು ಬುಧವಾರ ವಿಶೇಷ ತನಿಖಾ ತಂಡವೊಂದನ್ನು (SIT) ರಚಿಸಿದ್ದಾರೆ. ಆ್ಯಂಜೆಲ್ ಚಕ್ಮಾ ಅವರು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ನಲ್ಲಿ ಡಿಸೆಂಬರ್ 9ರಂದು ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡು ಸಾವನ್ನಪ್ಪಿದ್ದರು.
ಈವರೆಗಿನ ತನಿಖೆಯ ಆಧಾರದ ಮೇಲೆ ಹೇಳುವುದಾದರೆ, ಈ ಘಟನೆ ಜನಾಂಗೀಯ ದ್ವೇಷದಿಂದ ಪ್ರೇರಿತವಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಅಜಯ್ ಸಿಂಗ್ ತಿಳಿಸಿದ್ದಾರೆ.
ಡೆಹ್ರಾಡೂನ್ನಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮವೊಂದರಲ್ಲಿ ಕೆಲವರು ತನ್ನನ್ನು ಪರಿಹಾಸ್ಯ ಮಾಡಿದ್ದನ್ನು ಚಕ್ಮಾ ಆಕ್ಷೇಪಿಸಿದಾಗ ಮಾತಿನ ಚಕಮಕಿ ಉಂಟಾಗಿದ್ದು, ನಂತರ ಅವರ ಮೇಲೆ ಹಲ್ಲೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿ 24 ವರ್ಷದ ಆ್ಯಂಜೆಲ್ ಚಕ್ಮಾ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ಎಂಬಿಎ ಪದವಿ ಅಧ್ಯಯನ ನಡೆಸುತ್ತಿದ್ದರು. ಆ್ಯಂಜೆಲ್ ಹಾಗೂ ಅವರ ಸಹೋದರ ಮೈಕೆಲ್ ಮೇಲೆ ಆರು ಮಂದಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಬೆನ್ನುಮೂಳೆ ಹಾಗೂ ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದ ಆ್ಯಂಜೆಲ್, 17 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿ ಡಿಸೆಂಬರ್ 16ರಂದು ಕೊನೆಯುಸಿರೆಳೆದರು.
ಆರೋಪಿಗಳು ಹಾಗೂ ಸಂತ್ರಸ್ತರಿಗೆ ಪರಸ್ಪರ ಪರಿಚಯವಿರಲಿಲ್ಲ ಮತ್ತು ಕ್ಷಣಿಕ ಉದ್ವೇಗದಿಂದಾಗಿ ಈ ದಾಳಿ ನಡೆದಿದೆ ಎಂದು ಎಸ್ಎಸ್ಪಿ ಸಿಂಗ್ ವಿವರಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾದ 22 ವರ್ಷದ ನೇಪಾಳಿ ಪ್ರಜೆ ಯಾಗ್ಯಾರಾಜ್ ಅವಸ್ಥಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ. ಆತನನ್ನು ಹಿಡಿದುಕೊಡುವವರಿಗೆ 25 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ಬಹುಮಾನ ಘೋಷಿಸಲಾಗಿದೆ.
ಎಫ್ಐಆರ್ನಲ್ಲಿ ಹೆಸರಿಸಲಾದ ಇತರ ಐದು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಪ್ರಕರಣದ ಇಬ್ಬರು ಬಾಲ ಆರೋಪಿಗಳನ್ನು ಬಾಲಕೇಂದ್ರಕ್ಕೆ ಕಳುಹಿಸಲಾಗಿದೆ. ಇತರ ಮೂವರು ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಯಲ್ಲಿ ಇರಿಸಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ವಾಗ್ವಾದದ ಸಂದರ್ಭ ಆರೋಪಿ ಅವಸ್ಥಿಯು ಆ್ಯಂಜೆಲ್ ನನ್ನು ಇರಿಯಲು ಸಮೀಪದ ಮೊಟ್ಟೆ ಗಾಡಿಯಲ್ಲಿದ್ದ ಚೂರಿಯನ್ನು ಎತ್ತಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ದೃಶ್ಯಾವಳಿಗಳಿರುವ ಸಿಸಿಟಿವಿ ವೀಡಿಯೊವನ್ನು ಪೊಲೀಸರು ಸಂಗ್ರಹಿಸಿದ್ದು, ಸ್ಥಳೀಯ ನಿವಾಸಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಆ್ಯಂಜೆಲ್ ವಿರುದ್ಧ ಆರೋಪಿಗಳು ಜನಾಂಗೀಯ ನಿಂದನೆ ನಡೆಸಿದ್ದಾರೆ ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಎಸ್ಎಸ್ಪಿ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮಣಿಪುರ ಮೂಲದ ಸೂರಜ್ ಖ್ವಾಸ್ ಎಂಬವರು ಆಯೋಜಿಸಿದ್ದ ಸಂತೋಷಕೂಟದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ಭುಗಿಲೆದ್ದ ಸಂದರ್ಭ ಈ ಘಟನೆ ನಡೆದಿದೆ. ಆರೋಪಿಗಳ ಪೈಕಿ ಯಾರಿಗೂ ಈ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿದ್ದ ದಾಖಲೆಗಳಿಲ್ಲ ಎಂದು ಅವರು ಹೇಳಿದ್ದಾರೆ.







