ದಿಲ್ಲಿ | ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜಾಮೀನಿನಲ್ಲಿದ್ದ ವ್ಯಕ್ತಿ ಅತ್ಯಾಚಾರ ಪ್ರಕರಣದಲ್ಲಿ ಬಂಧನ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಿಲ್ಲಿ ಪೋಲಿಸರು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜಾಮೀನಿನಲ್ಲಿ ಹೊರಗಿದ್ದ ವ್ಯಕ್ತಿಯನ್ನು ಕಳೆದ ತಿಂಗಳು ಹರ್ಯಾಣದ ಪಟೇಲ್ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
ಮಂಜಿತ್ ಅಲಿಯಾಸ ಮಂಜಾ(39) ಬಂಧಿತ ಆರೋಪಿಯಾಗಿದ್ದು, ಹರ್ಯಾಣದ ಬಹಾದೂರಗಡದ ಪಟೇಲ್ ನಗರ ನಿವಾಸಿಯಾಗಿದ್ದಾನೆ.
ಪೋಲಿಸರ ಪ್ರಕಾರ ಜೂ.11ರಂದು ಪಟೇಲ್ ನಗರ ಪೋಲಿಸ್ ಠಾಣೆಯಲ್ಲಿ ಮಂಜಿತ್ ವಿರುದ್ಧ ದೂರು ದಾಖಲಾಗಿದ್ದು,ದೂರುದಾರರು ಆತನ ವಿರುದ್ಧ ಲೈಂಗಿಕ ದೌರ್ಜನ್ಯಗಳ ಆರೋಪಗಳನ್ನು ಹೊರಿಸಿದ್ದಾರೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆಯನ್ನು ಆರಂಭಿಸುತ್ತಿದ್ದಂತೆ ಮಂಜಿತ್ ತಲೆಮರೆಸಿಕೊಂಡಿದ್ದ. ಕೊನೆಗೂ ಜು.3ರಂದು ಪೋಲಿಸರ ಬಲೆಗೆ ಬಿದ್ದಿದ್ದಾನೆ.
ಮಂಜಿತ್ 2009ರಲ್ಲಿ ಹರ್ಯಾಣದಲ್ಲಿ ತನ್ನ ಸಹಚರ ಅರುಣ ಡಾಬಸ್ ಅಲಿಯಾಸ್ ಬಿಟ್ಟು ಜೊತೆ ಸೇರಿಕೊಂಡು ಇನ್ನೋರ್ವ ಕ್ರಿಮಿನಲ್ ಹತ್ಯೆಯನ್ನು ಮಾಡಿದ್ದ. 2012ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತಾದರೂ ನಂತರ 2015ರಲ್ಲಿ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಆತನಿಗೆ ಜಾಮೀನು ಮಂಜೂರು ಮಾಡಿತ್ತು.
ಪೋಲಿಸರ ಪ್ರಕಾರ,ಶಿಕ್ಷೆಗೊಳಗಾಗಿದ್ದರೂ ಮಂಜೀತ್ ಕೊಲೆ, ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಸೇರಿದಂತೆ ಹರ್ಯಾಣದಲ್ಲಿ ಇತರ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ.