ಚುನಾವಣೆಗಳಲ್ಲಿ ಹಣ ಹಂಚುವ ಮೂಲಕ ಜನರ ಕಲ್ಯಾಣ ಸಾಧ್ಯವಿಲ್ಲ: ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ

ಮುರಳಿ ಮನೋಹರ್ ಜೋಶಿ | Photo Credit : PTI
ಹೊಸದಿಲ್ಲಿ: ಚುನಾವಣೆಗಳಲ್ಲಿ ಜನರಿಗೆ ಹಣ ಹಂಚುವ ಮೂಲಕ ಕಲ್ಯಾಣವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, “ಸಂವಿಧಾನ ಕಡ್ಡಾಯಗೊಳಿಸಿರುವ ಆರ್ಥಿಕ ಸಮಾನತೆ ಮತ್ತು ಸಮಾನ ಪ್ರಗತಿಯನ್ನು ಖಾತರಿಗೊಳಿಸಬೇಕಿದೆ” ಎಂದು ಕಿವಿಮಾತು ಹೇಳಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಹಾಗೂ ಮಾಜಿ ಕಾನೂನು ಕಾರ್ಯದರ್ಶಿ ಜಿ.ವಿ.ಜಿ.ಕೃಷ್ಣಮೂರ್ತಿಯವರ 91ನೇ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮುರಳಿ ಮನೋಹರ್ ಜೋಶಿ, ತಾರತಮ್ಯವನ್ನು ಹೋಗಲಾಡಿಸಲು ಹಾಲಿ ಅಸ್ತಿತ್ವದಲ್ಲಿರುವ ರಾಜ್ಯಗಳನ್ನು ವಿಭಜಿಸಿ ಸಮಾನ ಸಂಖ್ಯೆ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ, ಸಮಾನ ಜನ ಸಂಖ್ಯೆ ಇರುವ ಸಣ್ಣ ರಾಜ್ಯಗಳನ್ನು ರಚಿಸಬೇಕು ಎಂದು ಕರೆ ನೀಡಿದ್ದಾರೆ.
ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕಿದೆ. ಆದರೆ, ಕರ್ನಾಟಕ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ಜನರ ನಡುವೆ ಅಗಾಧ ಪ್ರಮಾಣದ ಆರ್ಥಿಕ ತಲಾದಾಯದ ಅಸಮತೋಲನವಿದೆ ಎಂದು ಮಾಜಿ ಕೇಂದ್ರ ಸಚಿವರೂ ಆದ ಮುರಳಿ ಮನೋಹರ್ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕದಲ್ಲಿ ವ್ಯಕ್ತಿಯೊಬ್ಬನ ತಲಾದಾಯವೆಷ್ಟು? ಆತ ಒಂದು ನಿರ್ದಿಷ್ಟ ಆರ್ಥಿಕ ಸಾಮರ್ಥ್ಯದೊಂದಿಗೆ ಮತ ಚಲಾಯಿಸುತ್ತಾನೆ. ನಂತರ, ಮರಳುಗಾಡು, ಗಿರಿಪ್ರದೇಶ ಅಥವಾ ಈಶಾನ್ಯ ರಾಜ್ಯಗಳಲ್ಲಿ ವಾಸಿಸುತ್ತಿರುವ ವ್ಯಕ್ತಿಯ ತಲಾದಾಯವೆಷ್ಟು? ಆತನಿಗೂ ಸಮಾನ ತಲಾದಾಯವಿದೆಯೆ? ಇಲ್ಲ” ಎಂದು ಅವರು ಬೊಟ್ಟು ಮಾಡಿದ್ದಾರೆ.
“ಆರ್ಥಿಕ ಸ್ಥಿತಿ ಹಾಗೂ ಅಭಿವೃದ್ಧಿ ನಡುವಿನ ವ್ಯತ್ಯಾಸ ತಾರತಮ್ಯವಾಗಿದ್ದು, ಚುನಾವಣೆಗಳಲ್ಲಿ ಹಣ ಹಂಚುವ ಮೂಲಕ ಕಲ್ಯಾಣ ಸಾಧಿಸಲು ಸಾಧ್ಯವಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇಂದು ನೀವು ಚುನಾವಣೆಗೂ ಮುನ್ನ ಹಣ ಹಂಚಿದ್ದೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಣ ಹಂಚಿಕೆ ಮಾಡಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ, ನೀವು ಮತಗಳನ್ನು ಖರೀದಿಸಲು ಹಣ ಹಂಚಿದ್ದೀರಿ ಎಂದು ಅವರು ಹೇಳುತ್ತಿದ್ದಾರೆ” ಎಂದು ಬಿಜೆಪಿಯ ಮಾಜಿ ರಾಷ್ಟ್ರಾಧ್ಯಕ್ಷರೂ ಆದ ಮುರಳಿ ಮನೋಹರ್ ಜೋಶಿ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಆಡಳಿತಾರೂಢ ಎನ್ಡಿಎ ಸರಕಾರ ಕಲ್ಯಾಣ ಕಾರ್ಯಕ್ರಮಗಳ ನೆಪದಲ್ಲಿ ಹಣ ಹಂಚಿಕೆ ಮಾಡಿದ್ದ ವಿಷಯವು ಬಿಹಾರದಲ್ಲಿನ ಎನ್ಡಿಎ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುರಳಿ ಮನೋಹರ್ ಜೋಶಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.







