ಮುರ್ಶಿದಾಬಾದ್ ಹತ್ಯೆ ಪ್ರಕರಣ | 13 ದೋಷಿಗಳಿಗೆ ಜೀವಾವಧಿ ಶಿಕ್ಷೆ

ಸಾಂದರ್ಭಿಕ ಚಿತ್ರ
ಕೋಲ್ಕತಾ, ಡಿ. 24: ಪಶ್ಚಿಮಬಂಗಾಳದ ಮುರ್ಸಿದಾಬಾದ್ ಜಿಲ್ಲೆಯಲ್ಲಿ ಎಪ್ರಿಲ್ ನಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ಎಪ್ರಿಲ್ ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಸಂದರ್ಭ ತಂದೆ ಹಾಗೂ ಮಗನನ್ನು ಥಳಿಸಿ ಹತ್ಯೆಗೈದ ಪ್ರಕರಣದಲ್ಲಿ 13 ಮಂದಿಗೆ ಜಿಲ್ಲಾ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯ 13 ದೋಷಿಗಳಲ್ಲಿ ಪ್ರತಿಯೊಬ್ಬರಿಗೂ ದರೋಡೆಗೆ 10 ವರ್ಷ, ಮನೆ ಅತಿಕ್ರಮಣಕ್ಕೆ 10 ವರ್ಷ ಹಾಗೂ ಗಲಭೆ ನಡೆಸಿರುವುದಕ್ಕೆ 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ಅಲ್ಲದೆ, ಸಂತ್ರಸ್ತ ಕುಟುಂಬಕ್ಕೆ ಪರಿಹಾರವಾಗಿ 15 ಲಕ್ಷ ರೂ. ಪಾವತಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
‘‘ಭಾರತದಲ್ಲಿ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣದಲ್ಲಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾದ ಎರಡನೇ ಪ್ರಕರಣ ಇದಾಗಿದೆ. ನಾವು ಮರಣ ದಂಡನೆಗೆ ಕೋರಿದ್ದೆವು’’ ಎಂದು ವಿಶೇಷ ಸರಕಾರಿ ಅಭಿಯೋಜನೆ ಬಿವಾಸ್ ಚಟರ್ಜಿ ತಿಳಿಸಿದ್ದಾರೆ.
ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆ ಹಿನ್ನೆಲೆಯಲ್ಲಿ ಎಪ್ರಿಲ್ 11 ಹಾಗೂ 12ರಂದು ಮುರ್ಶಿದಾಬಾದ್ ಜಿಲ್ಲೆಯ ಸಂಸೇರ್ಗಂಜ್ ಹಾಗೂ ಸುತಿ ಪ್ರದೇಶದಲ್ಲಿ ಕೋಮು ಘಷಣೆ ಭುಗಿಲೆದ್ದಿತ್ತು. ಮನೆಗಳನ್ನು ಲೂಟಿಗೈಯಲಾಗಿತ್ತು. ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು ಹಾಗೂ ಪೊಲೀಸರ ಮೇಲೆ ದಾಳಿ ನಡೆಸಲಾಗಿತ್ತು.
ಜಾಫ್ರಾಬಾದ್ ನಲ್ಲಿ ಗುಂಪೊಂದು 72 ವರ್ಷದ ಹರಗೋಬಿಂದ್ ದಾಸ್ ಹಾಗೂ ಅವರ ಪುತ್ರ ಚಂದನ್ ದಾಸ್ ಅವರನ್ನು ಥಳಿಸಿ ಹತ್ಯೆಗೈದಿತ್ತು. ಈ ಹಿಂಸಾಚಾರದಲ್ಲಿ ಇವರಿಬ್ಬರು ಸೇರಿದಂತೆ ಮೂವರು ಮೃತಪಟ್ಟಿದ್ದರು.







