ಮುರ್ಷಿದಾಬಾದ್ ಗಲಭೆ ಪೂರ್ವನಿಯೋಜಿತ; ಇದರಲ್ಲಿ ಬಿಜೆಪಿ, ಬಿಎಸ್ಎಫ್ ಭಾಗಿಯಾಗಿದೆ: ಮಮತಾ ಬ್ಯಾನರ್ಜಿ ಗಂಭೀರ ಆರೋಪ

ಮಮತಾ ಬ್ಯಾನರ್ಜಿ | PC : PTI
ಕೋಲ್ಕತ್ತಾ: ಇತ್ತೀಚೆಗೆ ನಡೆದ ಮುರ್ಷಿದಾಬಾದ್ ಕೋಮು ಗಲಭೆಯು ಪೂರ್ವನಿಯೋಜಿತವಾಗಿದ್ದು, ಬಾಂಗ್ಲಾದೇಶದಿಂದ ಗಡಿ ನುಸುಳುವಿಕೆಗೆ ಅವಕಾಶ ನೀಡುವ ಮೂಲಕ, ಬಿಎಸ್ಎಫ್, ಕೇಂದ್ರ ಸಂಸ್ಥೆಗಳು ಹಾಗೂ ಬಿಜೆಪಿಯ ಒಂದು ವರ್ಗ ಈ ಭಾಗದಲ್ಲಿ ಪ್ರಕ್ಷುಬ್ಧತೆ ಉಲ್ಬಣಿಸಲು ನೆರವು ನೀಡುತ್ತಿವೆ ಎಂದು ಬುಧವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದರು.
ನೆರೆಯ ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇರುವಾಗಲೂ, ಕೇಂದ್ರ ಸರಕಾರವು ಗಡಿಯಲ್ಲಿ ಅಕ್ರಮ ಪ್ರವೇಶಕ್ಕೆ ಅವಕಾಶ ನೀಡಿದೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವಲ್ಲಿ ಬಿಎಸ್ಎಫ್ ಹಾಗೂ ಕೆಲವು ಕೇಂದ್ರ ಸಂಸ್ಥೆಗಳ ಪಾತ್ರವಿದೆ ಎಂದೂ ದೂರಿದರು.
ದೌರ್ಜನ್ಯಕಾರಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ ಅವರು, ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವನ್ನು ಹದ್ದುಬಸ್ತಿನಲ್ಲಿಡಿ ಎಂದೂ ತಾಕೀತು ಮಾಡಿದರು.
"ಅಮಿತ್ ಶಾ ಮೇಲೆ ಒಂದು ಕಣ್ಣಿಡುವಂತೆ ನಾನು ಪ್ರಧಾನಿಗೆ ಮನವಿ ಮಾಡುತ್ತೇನೆ. ಅವರು ತಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಯನ್ನು ಸಾಧಿಸಿಕೊಳ್ಳಲು ದೇಶಕ್ಕೆ ಹಾನಿಯೆಸಗುತ್ತಿದ್ದಾರೆ" ಎಂದು ಟೀಕಾಪ್ರಹಾರ ನಡೆಸಿದರು.
"ಮುರ್ಷಿದಾಬಾದ್ನಲ್ಲಿ ಸಂಭವಿಸಿದ ಗಲಭೆಯಲ್ಲಿ ಗಡಿಗುಂಟ ಇರುವ ಸಮಾಜ ಘಾತುಕ ಶಕ್ತಿಗಳ ಪಾತ್ರವಿದೆ ಎಂಬ ಸುದ್ದಿ ನನಗೆ ತಿಳಿದು ಬಂದಿದೆ. ಗಡಿಯನ್ನು ಕಾಯುವುದು ಬಿಎಸ್ಎಫ್ ಕರ್ತವ್ಯವಲ್ಲವೆ? ಅಂತಾರಾಷ್ಟ್ರೀಯ ಗಡಿಯನ್ನು ರಾಜ್ಯ ಸರಕಾರ ಕಾಯುವುದಿಲ್ಲ. ಇದರ ಜವಾಬ್ದಾರಿಯನ್ನು ಕೇಂದ್ರ ಸರಕಾರ ಹೊತ್ತುಕೊಳ್ಳಬೇಕು" ಎಂದು ಅವರು ಆಗ್ರಹಿಸಿದರು.
ಇದೇ ವೇಳೆ, ಮುರ್ಷಿದಾಬಾದ್ ಗಲಭೆಯಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದರು. ಅಲ್ಲದೆ, ಮುರ್ಷಿದಾಬಾದ್ ಗಲಭೆಯಲ್ಲಿನ ಬಿಎಸ್ಎಫ್ ಪಾತ್ರದ ಕುರಿತು ತನಿಖೆ ಕೈಗೊಳ್ಳುವಂತೆ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.