ಡಿ.5ರೊಳಗೆ ವಕ್ಫ್ ಆಸ್ತಿ ವಿವರಗಳನ್ನು UMEED ಪೋರ್ಟಲ್ ಗೆ ಅಪ್ಲೋಡ್ ಮಾಡುವಂತೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮನವಿ

Photo credit: clarionindia
ಹೊಸದಿಲ್ಲಿ, ಅ.22: ದೇಶದ ಎಲ್ಲಾ ನೋಂದಾಯಿತ ವಕ್ಫ್ ಆಸ್ತಿಗಳಾದ ಮಸೀದಿಗಳು, ಮದರಸಾಗಳು, ಖಬರ್ಸ್ಥಾನಗಳು, ಖಾಂಖಾಗಳು, ದರ್ಗಾಗಳು ಹಾಗೂ ಇಮಾಂಬರಾಗಳ ವಿವರಗಳನ್ನು ಡಿ.5ರೊಳಗೆ ಸರ್ಕಾರದ ಅಧಿಕೃತ UMEED ಪೋರ್ಟಲ್ (umeed.minorityaffairs.gov.in) ನಲ್ಲಿ ಅಪ್ಲೋಡ್ ಮಾಡಬೇಕೆಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಮನವಿ ಮಾಡಿದೆ.
2025ರ ವಕ್ಫ್ (ತಿದ್ದುಪಡಿ) ಕಾಯ್ದೆಯ ಸಂಭಾವ್ಯ ಪರಿಣಾಮಗಳನ್ನು ಮನಗಂಡು, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ದೇಶದಾದ್ಯಂತ ಮುಸ್ಲಿಮರಿಗೆ ಈ ಮನವಿ ಮಾಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ AIMPLB ತಿದ್ದುಪಡಿ ಕಾಯ್ದೆಯ ಸೆಕ್ಷನ್ 3B ಅಡಿಯಲ್ಲಿ ಎಲ್ಲಾ “ನೋಂದಾಯಿತ ಔಖಾಫ್” ಆಸ್ತಿಗಳ ಮಾಹಿತಿಯನ್ನು ಪೋರ್ಟಲ್ನಲ್ಲಿ ನವೀಕರಿಸುವುದು ಕಡ್ಡಾಯವಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಂಡಳಿಯು ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ನೆಲಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಕೆಲವು ನಿಯಮಗಳಿಗೆ ಸೀಮಿತ ಪರಿಹಾರ ದೊರೆತಿದ್ದರೂ ಆಸ್ತಿ ವಿವರಗಳ ಅಪ್ಲೋಡ್ ಮಾಡುವುದು ಕಡ್ಡಾಯವಾಗಿಯೇ ಉಳಿದಿದೆ ಎಂದು ಸ್ಪಷ್ಟಪಡಿಸಿದೆ.
“ಸಮಯ ಕಡಿಮೆಯಿದೆ. ಅಗತ್ಯ ಮಾಹಿತಿಯನ್ನು ಸಲ್ಲಿಸಲು ವಿಫಲವಾದರೆ ಮಸೀದಿಗಳು, ಖಬರ್ಸ್ಥಾನಗಳು ಹಾಗೂ ಇತರ ಧಾರ್ಮಿಕ ದತ್ತಿಗಳ ಕಾನೂನು ಮಾನ್ಯತೆ ಅಪಾಯಕ್ಕೊಳಗಾಗಬಹುದು,” ಎಂದು AIMPLB ಎಚ್ಚರಿಸಿದೆ. ಗಡುವು ವಿಸ್ತರಣೆಗೆ ಮಂಡಳಿಯು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದು, ವಿಚಾರಣೆ ಪ್ರಸ್ತುತ ಮುಂದುವರಿಯುತ್ತಿದೆ ಎಂದು ಅದು ಹೇಳಿದೆ.
ಅಪ್ಲೋಡ್ ಪ್ರಕ್ರಿಯೆ ಸುಗಮಗೊಳಿಸಲು AIMPLB ದೇಶದ ಮುಸ್ಲಿಂ ಸಂಘಟನೆಗಳು, ಧಾರ್ಮಿಕ ವಿದ್ವಾಂಸರು, ಇಮಾಮ್ಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಜಿಲ್ಲೆ, ತಾಲೂಕು ಮತ್ತು ಬ್ಲಾಕ್ ಮಟ್ಟಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಕರೆ ನೀಡಿದೆ. ಈ ಕೇಂದ್ರಗಳು ವಕ್ಫ್ ಆಸ್ತಿಗಳ ನಿರ್ವಹಕರಾದ ಮುತವಲ್ಲಿಗಳಿಗೆ ತಾಂತ್ರಿಕ ಸಹಾಯ ಮತ್ತು ಮಾರ್ಗದರ್ಶನ ನೀಡಲಿವೆ.
ರಾಜ್ಯ ಮಟ್ಟದಲ್ಲಿ ಔಕಾಫ್ ರಕ್ಷಣಾ ಸಮಿತಿಗಳು ರಚನೆಯಾಗಿದ್ದು, ಇವು ಸ್ವಯಂಸೇವಕರಿಗೆ ತರಬೇತಿ ನೀಡುತ್ತಿವೆ ಮತ್ತು ಅಗತ್ಯ ಅಂಕಿ ಅಂಶ ಸಂಗ್ರಹ ಕಾರ್ಯವನ್ನು ಸಮನ್ವಯಗೊಳಿಸುತ್ತಿವೆ. ತಾಂತ್ರಿಕ ದೋಷಗಳು ಅಥವಾ ವಿಳಂಬಗಳಿಂದ ಉಂಟಾಗುವ ಕಾನೂನು ತೊಂದರೆಗಳನ್ನು ತಪ್ಪಿಸಲು ತಜ್ಞರ ಸಹಾಯದ ಅಗತ್ಯವಿದೆ ಎಂದು ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಸೂಚಿಸಿದೆ.
ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳನ್ನು ಸಂರಕ್ಷಿಸುವುದು ಕಡ್ಡಾಯವಾಗಿದ್ದು, ಅವು ಕಾಯ್ದೆಯ ಅನುಸರಣೆಗೆ ಪುರಾವೆಯಾಗಿ ಕಾರ್ಯನಿರ್ವಹಿಸಲಿವೆ ಎಂದು ಮಂಡಳಿ ತಿಳಿಸಿದೆ. ಅಪ್ಲೋಡ್ ವೇಳೆ ತಾಂತ್ರಿಕ ತೊಂದರೆಗಳು ಎದುರಾದಲ್ಲಿ ಅವುಗಳನ್ನು ದಾಖಲಿಸಿ, ಆಯಾ ರಾಜ್ಯ ವಕ್ಫ್ ಮಂಡಳಿಗಳಿಗೆ ಲಿಖಿತ ವರದಿ ನೀಡುವಂತೆ ಸೂಚಿಸಲಾಗಿದೆ.
AIMPLB ಅಧಿಕೃತ ಪೋರ್ಟಲ್ ಲಿಂಕ್ ಜೊತೆಗೆ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿ ಬಿಡುಗಡೆ ಮಾಡಿದೆ. ತರಬೇತಿ ವೀಡಿಯೊಗಳು, ಸಲಹಾ ಸೇವೆಗಳು ಹಾಗೂ ಸಹಾಯ ಕೇಂದ್ರಗಳ ಮೂಲಕ ಸಮುದಾಯಕ್ಕೆ ಮಾರ್ಗದರ್ಶನ ನೀಡುವುದಾಗಿ ಮಂಡಳಿಯು ಭರವಸೆ ನೀಡಿದೆ.
“ವಕ್ಫ್ ಆಸ್ತಿ ವಿವರಗಳನ್ನು ಅಪ್ಲೋಡ್ ಮಾಡುವುದು ಕೇವಲ ಕಾನೂನಿನ ಬಾಧ್ಯತೆ ಮಾತ್ರವಲ್ಲ; ಅದು ಧಾರ್ಮಿಕ ಕರ್ತವ್ಯ ಹಾಗೂ ಸಮುದಾಯದ ಒಗ್ಗಟ್ಟಿನ ಜವಾಬ್ದಾರಿ,” ಎಂದು ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಒತ್ತಿ ಹೇಳಿದೆ. ಮಂಡಳಿಯು ಮುಸ್ಲಿಮರನ್ನು ಈ ಕಾರ್ಯದಲ್ಲಿ ತಕ್ಷಣ ಹಾಗೂ ಸಂಘಟಿತವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದೆ.







