ಮುಸ್ಲಿಂ ಹೆಣ್ಣುಮಕ್ಕಳು ನೂರಾರು ವರ್ಷಗಳ ಕಾಲ ಮೋದಿಯನ್ನು ಆಶೀರ್ವದಿಸಲಿದ್ದಾರೆ: ತ್ರಿವಳಿ ತಲಾಖ್ ಕಾನೂನು ಕುರಿತು ಪ್ರಧಾನಿ ಅಭಿಮತ

ಪ್ರಧಾನಿ ನರೇಂದ್ರ | Photo: PTI
ಸಹರಣ್ಪುರ್ (ಉತ್ತರ ಪ್ರದೇಶ): ತಮ್ಮ ನೆತ್ತಿಯ ಮೇಲೆ ತೂಗುತ್ತಿದ್ದ ತ್ರಿವಳಿ ತಲಾಖ್ ಕತ್ತಿಯನ್ನು ನಾನು ತೆಗೆದು ಹಾಕಿದ್ದರಿಂದ ಮುಸ್ಲಿಂ ಹೆಣ್ಣುಮಕ್ಕಳು ಹಾಗೂ ಅವರ ಕುಟುಂಬಗಳು ನೂರಾರು ವರ್ಷಗಳ ಕಾಲ ನನ್ನನ್ನು ಆಶೀರ್ವದಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಅಭಿಮತ ವ್ಯಕ್ತಪಡಿಸಿದ್ದಾರೆ.
ಸಹರಣ್ಪುರ್ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಬಿಜೆಪಿ ಆಡಳಿತದಲ್ಲಿ ಕಂಡು ಬಂದಂತೆ ಸರಕಾರದ ಕೊಡುಗೆಗಳು ಜಾತಿ ಅಥವಾ ಧರ್ಮವನ್ನು ಮೀರಿ ಎಲ್ಲ ವರ್ಗದ ಜನರನ್ನೂ ತಲುಪಿದಾಗ ಮಾತ್ರ ಜಾತ್ಯತೀತತೆ ಸಾಕಾರವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತ್ರಿವಳಿ ತಲಾಖ್ನ ಎಲ್ಲ ಕೆಡುಕುಗಳಿಗೂ ಬಿಜೆಪಿ ಸರಕಾರ ಕೊನೆ ಹಾಡಿದೆ. ಕೋಟ್ಯಂತರ ಮುಸ್ಲಿಂ ಸಹೋದರಿಯರ ಹಿತಾಸಕ್ತಿ ಕಾಪಾಡಲು ನಾವು ಬಲಿಷ್ಠ ಕಾನೂನನ್ನು ಜಾರಿಗೆ ತಂದಿದ್ದೇವೆ ಎಂದೂ ಅವರು ಹೇಳಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಗಮನಾರ್ಹ ಸಂಖ್ಯೆಯ ಮುಸ್ಲಿಂ ಮತದಾರರಿರುವ ಲೋಕಸಭಾ ಕ್ಷೇತ್ರಗಳಿದ್ದು, ಮುಸ್ಲಿಂ ಮತದಾರರನ್ನು ಬಿಜೆಪಿಯತ್ತ ಸೆಳೆಯುವ ಉದ್ದೇಶದ ಭಾಗವಾಗಿ ತ್ರಿವಳಿ ತಲಾಖ್ ರದ್ದತಿಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.







