ಭಾರೀ ಸಂಖ್ಯೆಯ ನುಸುಳುಕೋರರಿಂದಾಗಿ ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿದೆ: ಅಮಿತ್ ಶಾ

ಕೇಂದ್ರ ಗೃಹಸಚಿವ ಅಮಿತ್ ಶಾ (Photo: PTI)
ಹೊಸದಿಲ್ಲಿ: ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಹೆಚ್ಚಳಕ್ಕೆ ಭಾರೀ ಪ್ರಮಾಣದಲ್ಲಿ ಅಕ್ರಮ ವಲಸೆಯೇ ಕಾರಣ ಹೊರತು ಫಲವತ್ತತೆ ದರವಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ʼದೈನಿಕ್ ಜಾಗರಣ್ʼ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಒಳನುಸುಳುವಿಕೆ, ಜನಸಂಖ್ಯಾ ಬದಲಾವಣೆ ಮತ್ತು ಪ್ರಜಾಪ್ರಭುತ್ವ’ ಕುರಿತು ಉಪನ್ಯಾಸ ನೀಡಿದ ಶಾ, ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ.24.6 ದರದಲ್ಲಿ ಹೆಚ್ಚಳವಾಗಿದೆ ಮತ್ತು ಹಿಂದೂಗಳ ಜನಸಂಖ್ಯೆ ಶೇ.4.5ರಷ್ಟು ಕುಸಿದಿದೆ. ಈ ಕುಸಿತಕ್ಕೆ ಕಾರಣ ನುಸುಳುವಿಕೆಯೇ ಹೊರತು ಫಲವತ್ತತೆ ದರವಲ್ಲ. ಭಾರತವು ವಿಭಜನೆಗೊಂಡಾಗ ಭಾರತದ ಇಕ್ಕೆಲಗಳಲ್ಲಿ ಧರ್ಮದ ಆಧಾರದಲ್ಲಿ ಪಾಕಿಸ್ತಾನದ ರಚನೆಯಾಗಿತ್ತು, ನಂತರ ಅದು ಪಾಕಿಸ್ತಾನ ಮತ್ತು ಬಾಂಗ್ಲಾದೇಶವಾಗಿ ವಿಭಜನೆಗೊಂಡಿತು. ಎರಡೂ ಕಡೆಗಳಿಂದ ಒಳನುಸುಳುವಿಕೆಯು ಜನಸಂಖ್ಯೆಯಲ್ಲಿ ಇಂತಹ ಗಮನಾರ್ಹ ಬದಲಾವಣೆಗೆ ಕಾರಣವಾಗಿದೆ ಎಂದು ಹೇಳಿದರು.
1951ರಿಂದ 2011ರವರೆಗಿನ ಜನಗಣತಿಯಲ್ಲಿ ಎಲ್ಲ ಧರ್ಮಗಳಲ್ಲಿ ಕಂಡು ಬಂದಿದ್ದ ಜನಸಂಖ್ಯಾ ಬೆಳವಣಿಗೆಯಲ್ಲಿನ ಅಸಮಾನತೆಗೆ ಒಳನುಸುಳುವಿಕೆ ಮುಖ್ಯ ಕಾರಣವಾಗಿತ್ತು ಎಂದರು.
ತನ್ನ ಪಕ್ಷವು 1950ರ ದಶಕದಿಂದಲೂ ‘ಪತ್ತೆ, ಅಳಿಸಿ ಮತ್ತು ಗಡಿಪಾರು’ ಎಂಬ ಮೂರು ತತ್ವಗಳನ್ನು ಅಳವಡಿಸಿಕೊಂಡಿತ್ತು ಎಂದು ಅವರು ಹೇಳಿದರು.
ಬಿಜೆಪಿ 1980ರಲ್ಲಿ ಸ್ಥಾಪನೆಗೊಂಡಿದ್ದರೂ 1951ರಲ್ಲಿ ಸ್ಥಾಪನೆಯಾಗಿದ್ದ ಭಾರತೀಯ ಜನಸಂಘದಲ್ಲಿ ಅದು ತನ್ನ ಬೇರುಗಳನ್ನು ಹೊಂದಿದೆ.
ಬಿಜೆಪಿ ಸರಕಾರವು ಅಕ್ರಮ ವಲಸಿಗರನ್ನು ಗುರುತಿಸುತ್ತದೆ, ಅವರ ಹೆಸರುಗಳನ್ನು ಮತದಾರರ ಪಟ್ಟಿಗಳಿಂದ ಅಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತದೆ ಮತ್ತು ಅವರನ್ನು ಸ್ವದೇಶಗಳಿಗೆ ಗಡಿಪಾರು ಮಾಡಲು ಶ್ರಮಿಸುತ್ತದೆ ಎಂದು ಶಾ ಹೇಳಿದರು.
ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯನ್ನು ಸಮರ್ಥಿಸಿಕೊಂಡ ಅವರು, ‘ನುಸುಳುಕೋರರನ್ನು ನಮ್ಮ ಮತದಾರರ ಪಟ್ಟಿಗಳಲ್ಲಿ ಸೇರಿಸಿದಾಗ ಅವರು ದೇಶದ ರಾಜಕೀಯ ನಿರ್ಧಾರ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ’ ಎಂದರು.
ಎಸ್ಐಆರ್ ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ ಎಂದು ಹೇಳಿದ ಶಾ, ಸಂವಿಧಾನವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ಚುನಾವಣಾ ಆಯೋಗಕ್ಕೆ ವಹಿಸಿದೆ ಮತ್ತು ಮತದಾರ ವ್ಯಾಖ್ಯಾನಕ್ಕೆ ಅನುಗುಣವಾಗಿ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಕೆಲವು ರಾಜಕೀಯ ಪಕ್ಷಗಳು ಅಕ್ರಮ ವಲಸಿಗರನ್ನು ದೇಶಕ್ಕೆ ಬೆದರಿಕೆಯನ್ನಾಗಿ ನೋಡುವುದಿಲ್ಲ, ಅವರನ್ನು ತಮ್ಮ ಮತಬ್ಯಾಂಕ್ಗಳನ್ನಾಗಿ ನೋಡುತ್ತವೆ ಎಂದು ಹೇಳಿದರು.







