ಉತ್ತರ ಪ್ರದೇಶದ ಉಪ ಚುನಾವಣೆ | ಜಿಲ್ಲೆಗಳಿಂದ ಮುಸ್ಲಿಂ-ಯಾದವ್ ಅಧಿಕಾರಿಗಳಿಗೆ ಕ್ಷೇತ್ರ ಕಾರ್ಯದಿಂದ ಕೊಕ್!

ಅಖಿಲೇಶ್ ಯಾದವ್ | PC : PTI
ಲಕ್ನೊ : 10 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿರುವ ಜಿಲ್ಲೆಗಳಿಂದ ಮುಸ್ಲಿಂ-ಯಾದವ್ ಅಧಿಕಾರಿಗಳನ್ನು ಹೊರ ಹಾಕಲಾಗಿದೆ ಎಂದು ವರದಿಯಾಗಿದ್ದು, ಈ ಕುರಿತು ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮುಸ್ಲಿಂ ಹಾಗೂ ಯಾದವ ಸಮುದಾಯದ ಅಧಿಕಾರಿಗಳನ್ನು ಚುನಾವಣಾ ಜಿಲ್ಲೆಗಳ ಕ್ಷೇತ್ರ ಕಾರ್ಯದಿಂದ ತೆಗೆದು ಹಾಕುವ ಮೂಲಕ, ತಮ್ಮ ಸರಕಾರದಲ್ಲಿ ಅಧಿಕಾರಿಗಳು ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ ಎಂಬುದನ್ನು ಬಿಜೆಪಿ ಒಪ್ಪಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಮಾಧ್ಯಮ ಸಂಸ್ಥೆಯೊಂದು ಅಂತಹ ಪ್ರತಿಪಾದನೆ ಮಾಡಿರುವ ವರದಿಯೊಂದನ್ನು ಹಂಚಿಕೊಂಡಿರುವ ಅಖಿಲೇಶ್ ಯಾದವ್, ರಾಜ್ಯದ ಜನತೆ ಬಿಜೆಪಿಯನ್ನು ಪರಾಭವಗೊಳಿಸಲು ನಿರ್ಧರಿಸಿರುವುದರಿಂದ, ಉಪ ಚುನಾವಣೆಯಲ್ಲಿ ಬಿಜೆಪಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಂ ಹಾಗೂ ಯಾದವ ಸಮುದಾಯದ ಅಧಿಕಾರಿಗಳನ್ನು ಕ್ಷೇತ್ರ ಕಾರ್ಯದಿಂದ ತೆಗೆದು ಹಾಕಲಾಗಿದೆ ಎಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಆದರೆ, ಈ ವರದಿಗಳನ್ನು ಅಲ್ಲಗಳೆದಿರುವ ಬಿಜೆಪಿ ನಾಯಕರು, ವರ್ಗಾವಣೆಗಳು ದೈನಂದಿನ ಪ್ರಕ್ರಿಯೆಯಾಗಿದ್ದು, ಅಧಿಕಾರಿಗಳನ್ನು ಹುದ್ದೆಗೆ ನಿಯೋಜಿಸಲು ಜ್ಯೇಷ್ಠತೆಯೇ ಮಾನದಂಡವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ, ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಕೇವಲ 33 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿರುವ ಬಿಜೆಪಿ ನಾಯಕರು, ಮುಸ್ಲಿಂ ಹಾಗೂ ಯಾದವ ಸಮುದಾಯಗಳಿಗೆ ಸೇರಿದ ನಾಯಕರು ಬಿಜೆಪಿ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದ್ದು, ಅವರನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕಬೇಕು ಎಂದು ನಾವು ಆಗ್ರಹಿಸಿದ್ದೆವು ಎಂದು ಹೇಳಿಕೊಂಡಿದ್ದಾರೆ.
ಸೌಜನ್ಯ : deccanherald.com







