ಮುಸ್ಲಿಮರು ಪರಸ್ಪರ ಸಹಮತದಿಂದ ಮೌಖಿಕವಾಗಿ ವಿವಾಹ ಸಂಬಂಧ ಕೊನೆಗೊಳಿಸಬಹುದು: ಗುಜರಾತ್ ಹೈಕೋರ್ಟ್

ಗುಜರಾತ್ ಹೈಕೋರ್ಟ್ | PC : PTI
ಅಹ್ಮದಾಬಾದ್: ವಿವಾಹ ಸಂಬಂಧ ಕಡಿದುಕೊಳ್ಳಲು ಅಗತ್ಯವಿರುವ ಲಿಖಿತ ಒಪ್ಪಂದದ ಬದಲು ದಂಪತಿಗಳು ಪರಸ್ಪರ ಸಹಮತದ ಮೌಖಿಕ ವಿಚ್ಛೇದನ (ಮುಬರಾತ್) ಮೂಲಕ ಮುಸ್ಲಿಂ ವಿವಾಹ ಸಂಬಂಧವನ್ನು ಕೊನೆಗೊಳಿಸಬಹುದು ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವೈವಾಹಿಕ ಸಂಬಂಧ ವಿಸರ್ಜಿಸುವ ಪ್ರಕ್ರಿಯೆ ಕುರಿತಂತೆ ಖುರ್ ಆನ್ ಮತ್ತು ಹದೀಸ್ ಸಾಲುಗಳನ್ನು ಉಲ್ಲೇಖಿಸಿರುವ ನ್ಯಾಯಮೂರ್ತೀ ಎ.ವೈ.ಕೋಗ್ಜೆ ಮತ್ತು ಎನ್.ಎಸ್.ಸಂಜಯ್ ಗೌಡ ಅವರನ್ನು ಒಳಗೊಂಡ ಹೈಕೋರ್ಟ್ ಪೀಠ, ರಾಜಕೋಟ್ ಕುಟುಂಬ ನ್ಯಾಯಾಲಯ ಈ ಸಂಬಂಧ ನೀಡಿದ್ದ ತೀರ್ಪನ್ನು ತಿರಸ್ಕರಿಸಿದೆ.
ʼಮುಬರಾತ್ʼ ಮೂಲಕ ವಿವಾಹ ಸಂಬಂಧ ಕಡಿದುಕೊಳ್ಳಲು ಅನುಮತಿ ಕೋರಿ ಮುಸ್ಲಿಂ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ರಾಜಕೋಟ್ ಕುಟುಂಬ ನ್ಯಾಯಾಲಯ ತಿರಸ್ಕರಿಸಿತ್ತು. ಈ ಪ್ರಕರಣದಲ್ಲಿ ಪರಸ್ಪರ ಸಹಮತವನ್ನು ದಾಖಲಿಸುವ ಲಿಖಿತ ಒಪ್ಪಂದ ಇಲ್ಲದ ಹಿನ್ನೆಲೆಯಲ್ಲಿ ಕುಟುಂಬ ನ್ಯಾಯಾಲಯ ಕಾಯ್ದೆಯ ಸೆಕ್ಷನ್ 7ರ ಅನ್ವಯ ಈ ಅರ್ಜಿ ಸ್ವೀಕಾರಾರ್ಹವಲ್ಲ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿತ್ತು. ಕೌಟುಂಬಿಕ ಭಿನ್ನಾಭಿಪ್ರಾಯದ ಕಾರಣದಿಂದ ಪರಸ್ಪರ ಬೇರ್ಪಡಲು ಈ ದಂಪತಿಗಳು ನಿರ್ಧರಿಸಿದ್ದರು.
ವಿಚ್ಛೇದನಕ್ಕೆ ಲಿಖಿತ ಒಪ್ಪಂದ ಕಡ್ಡಾಯ ಎಂಬ ಕುಟುಂಬ ನ್ಯಾಯಾಲಯದ ತೀರ್ಪು ದೋಷಪೂರಿತ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಮುಸ್ಲಿಮರ ವೈಯಕ್ತಿಕ ಕಾನೂನು ಸೇರಿದಂತೆ ಕುರ್ ಆನ್ ಮತ್ತು ಹದೀಸ್ ಸಾಲುಗಳ ಅನುಸಾರ ನಡೆಯುತ್ತಿರುವ ವಿಧಿವಿಧಾನಗಳಿಗೆ ಕೆಳಹಂತದ ನ್ಯಾಯಾಲಯದ ತೀರ್ಪು ಪೂರಕವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.







