ಮುಸ್ಲಿಮರು ರಾಮನ ವಂಶಸ್ಥರು : ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ಜಮಾಲ್ ಸಿದ್ದಿಕಿ

:Photo | indiatoday
ಹೊಸದಿಲ್ಲಿ : ಸನಾತನ ಧರ್ಮ ಇಸ್ಲಾಂಗಿಂತ ಮೊದಲೇ ಇತ್ತು. ಮುಸ್ಲಿಮರು ರಾಮನ ವಂಶಸ್ಥರು ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜಮಾಲ್ ಸಿದ್ದಿಕಿ, ಸನಾತನ ಧರ್ಮವು ಇಸ್ಲಾಂಗಿಂತ ಬಹಳ ಹಿಂದೆಯೇ ಇತ್ತು. ಅದು ನಾಗರಿಕತೆಯ ಅಡಿಪಾಯ. ಎಲ್ಲಾ ಮುಸ್ಲಿಮರು ಭಗವಾನ್ ರಾಮನ ವಂಶಸ್ಥರು. ರಾಮ ಮತ್ತು ಕೃಷ್ಣರಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ. ಈ ಪೂಜ್ಯ ವ್ಯಕ್ತಿಗಳು ಇಸ್ಲಾಮಿಕ್ ಆಧ್ಯಾತ್ಮಿಕ ಪರಂಪರೆಯಲ್ಲಿ ಸ್ಥಾನ ಹೊಂದಿರಬಹುದು ಎಂದು ಪ್ರತಿಪಾದಿಸಿದರು.
ಇಸ್ಲಾಂ ಓರ್ವ ಪ್ರವಾದಿಯನ್ನು ಮಾತ್ರವಲ್ಲ, ಅನೇಕ ಪ್ರವಾದಿಗಳನ್ನು ಹೊಂದಿದೆ. ಕುರ್ಆನ್ 25 ಪ್ರವಾದಿಗಳನ್ನು ಉಲ್ಲೇಖಿಸುತ್ತದೆ. ಆದರೆ ಹದೀಸ್ ಮತ್ತು ಸಂಪ್ರದಾಯದ ಪ್ರಕಾರ, ಪ್ರಪಂಚದಾದ್ಯಂತ 1,24,000 ಪ್ರವಾದಿಗಳನ್ನು ಕಳುಹಿಸಲಾಗಿದೆ. ಭಗವಾನ್ ರಾಮ ಮತ್ತು ಕೃಷ್ಣ ಅವರಲ್ಲಿ ಇರಲಿಲ್ಲ ಎಂದು ನಾವು ಹೇಗೆ ಹೇಳಬಹುದು? ಅವರು ದೇವರ ಸಂದೇಶವಾಹಕರಾಗಿರಬಹುದು ಎಂದು ಹೇಳಿದರು.





