ಇಂಡಿ ಮೈತ್ರಿಕೂಟದ ʼವೋಟ್ ಜಿಹಾದ್ʼ ಲಾಭಕ್ಕಾಗಿ ಮುಸ್ಲಿಮರಿಗೆ ಒಬಿಸಿ ಸ್ಥಾನಮಾನ ನೀಡಲಾಗಿದೆ: ಮತ್ತೆ ಧರ್ಮವನ್ನು ಎಳೆತಂದ ಪ್ರಧಾನಿ ಮೋದಿ
ಇತ್ತೀಚೆಗಷ್ಟೇ ತಾನು ಹಿಂದೂ-ಮುಸ್ಲಿಂ ಭೇದ ಮಾಡುವುದಿಲ್ಲ ಎಂದಿದ್ದ ಪ್ರಧಾನಿ

ನರೇಂದ್ರ ಮೋದಿ | PTI
ಪಾಟಲೀಪುತ್ರ (ಬಿಹಾರ): ಇಂಡಿ ಮೈತ್ರಿಕೂಟದ ʼವೋಟ್ ಬ್ಯಾಂಕ್ ಜಿಹಾದ್ʼ ಲಾಭಕ್ಕಾಗಿ ಮುಸ್ಲಿಮರಿಗೆ ಇತರೆ ಹಿಂದುಳಿದ ವರ್ಗಗಳ ಸ್ಥಾನಮಾನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಅವರು ಇದಕ್ಕೂ ಮುನ್ನ, ನಾನು ಹಿಂದೂ-ಮುಸ್ಲಿಂ ಭೇದ ಮಾಡುವುದಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದಿದ್ದ ಮುಸ್ಲಿಂ ವಿರೋಧದ ಆರೋಪವನ್ನು ತಳ್ಳಿ ಹಾಕಿದ್ದರು.
ಬಿಹಾರದ ಪಾಟಲೀಪುತ್ರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಇಂಡಿ ಮೈತ್ರಿಕೂಟವು ‘ಮುಂಜಿ’ ಮಾಡಿಸಿಕೊಳ್ಳಲು ಬಯಸಿದರೂ, ನಾನು ಮಾತ್ರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯ ಪರವಾಗಿ ಪ್ರಬಲವಾಗಿ ನಿಂತಿದ್ದೇನೆ ಎಂದು ಘೋಷಿಸಿದರು.
“ಮೋದಿಗೆ ಸಂವಿಧಾನ ಮುಖ್ಯ. ಆದರೆ, ಇಂಡಿ ಮೈತ್ರಿಕೂಟಕ್ಕೆ ಮತ ಬ್ಯಾಂಕ್ ಗುಲಾಮಗಿರಿ ಮಾಡುವುದು ಅಥವಾ ʼಮುಜ್ರಾʼ ಬೇಕಿದ್ದರೂ ಅದು ನನಗೆ ಬೇಕಿಲ್ಲ. ಆದರೆ, ನಾನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯ ಪರವಾಗಿ ನಾನು ಪ್ರಬಲವಾಗಿ ನಿಂತಿದ್ದೇನೆ ಎಂದು ಅವರು ಪ್ರತಿಪಾದಿಸಿದರು.
ಈ ಚುನಾವಣೆ ದಿನದ 24 ಗಂಟೆಯೂ ದುಡಿಯುವ ಮೋದಿ ಹಾಗೂ ಯಾವುದೇ ಕೆಲಸವಿಲ್ಲದ ಇಂಡಿಯಾ ಮೈತ್ರಿಕೂಟದ ನಡುವಿನದ್ದಾಗಿದೆ ಎಂದೂ ಅವರು ವ್ಯಂಗ್ಯವಾಡಿದರು.
ಇಂಡಿಯಾ ಮೈತ್ರಿಕೂಟವು ಐದು ವರ್ಷಕ್ಕೆ ಐದು ಪ್ರಧಾನಿಗಳನ್ನು ಮಾಡುವ ಬಯಕೆ ಹೊಂದಿದೆ. ಮೈತ್ರಿಕೂಟದ ಪಕ್ಷಗಳೆಲ್ಲ ತಮ್ಮ ಸ್ವಂತ ಹಿತಾಸಕ್ತಿಗಾಗಿ ಒಂದುಗೂಡಿವೆ ಎಂದು ಟೀಕಿಸಿದ ಮೋದಿ, ಲಾಲೂ ಪ್ರಸಾದ್ ಯಾದವ್ ಅವರ ಪಕ್ಷದ ಚಿಹ್ನೆಯಾದ ಲಾಟೀನು ಕೇವಲ ಅವರ ಮನೆಗೆ ಮಾತ್ರ ಬೆಳಕು ತರುತ್ತದೆ. ಆದರೆ, ಉಳಿದ ಬಿಹಾರ ಕತ್ತಲಿನಲ್ಲಿರುತ್ತದೆ ಎಂದೂ ಗೇಲಿ ಮಾಡಿದರು.
ಇದಕ್ಕೂ ಮುನ್ನ, ಪಕ್ಷದ ಪ್ರಚಾರಕರು ಧಾರ್ಮಿಕ ನೆಲೆಯಲ್ಲಿ ಚುನಾವಣಾ ಪ್ರಚಾರ ನಡೆಸಕೂಡದು ಎಂದು ಚುನಾವಣಾ ಆಯೋಗವು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನೋಟಿಸ್ ನೀಡಿತ್ತು. ಇದಲ್ಲದೆ, ಒಂದು ವೇಳೆ ನಾನೇನಾದರೂ ಹಿಂದೂ-ಮುಸ್ಲಿಂ ಭೇದ ಮಾಡಿದರೆ ನಾನು ಸಾರ್ವಜನಿಕ ಜೀವನದಲ್ಲಿ ಮುಂದುವರಿಯಲು ಅನರ್ಹ ಎಂದೂ ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹೀಗಿದ್ದೂ, ಅವರು ಮತ್ತೆ ಮುಸ್ಲಿಂ ಮೀಸಲಾತಿ ವಿಷಯದ ಕುರಿತು ಆಕ್ಷೇಪಾರ್ಹ ಧಾಟಿಯಲ್ಲಿ ಪ್ರಸ್ತಾಪಿಸಿರುವುದು ವಿವಾದದ ಕಿಡಿಯನ್ನು ಹೊತ್ತಿಸಿದೆ.







