ಮುಸ್ಲಿಮರು ಅಯೋಧ್ಯೆಯನ್ನು ತೊರೆಯಬೇಕು, ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ವಿನಯ್ ಕಟಿಯಾರ್

ವಿನಯ್ ಕಟಿಯಾರ್ (Photo credit: abplive.com)
ಅಯೋಧ್ಯೆ : ಮುಸ್ಲಿಮರು ಅಯೋಧ್ಯೆಯನ್ನು ತೊರೆಯಬೇಕು ಅಯೋಧ್ಯೆಯಲ್ಲಿ ಯಾವುದೇ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಮ ಮಂದಿರ ಚಳವಳಿಯ ಭಾಗವಾಗಿದ್ದ ವಿನಯ್ ಕಟಿಯಾರ್, ವಿವಿಧ ಸರಕಾರಿ ಇಲಾಖೆಗಳು ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್ಒಸಿ)ಗಳನ್ನು ನೀಡದ ಕಾರಣ ಅಯೋಧ್ಯೆಯಲ್ಲಿ ಪ್ರಸ್ತಾವಿತ ಮಸೀದಿಯ ವಿನ್ಯಾಸ ಯೋಜನೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿರುವ ಬಗ್ಗೆ ಕೇಳಿದಾಗ ಪತ್ರಿಕಾಗೋಷ್ಠಿಯಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
"ಬಾಬರಿ ಮಸೀದಿಯ ಬದಲಿಗೆ ಯಾವುದೇ ಮಸೀದಿ ಅಥವಾ ಅಯೋಧ್ಯೆಯಲ್ಲಿ ಯಾವುದೇ ಇತರ ಮಸೀದಿ ನಿರ್ಮಾಣಕ್ಕೆ ಅನುಮತಿಸಲಾಗುವುದಿಲ್ಲ. ಮುಸ್ಲಿಮರಿಗೆ ಇಲ್ಲಿ ವಾಸಿಸಲು ಯಾವುದೇ ಹಕ್ಕಿಲ್ಲ. ನಾವು ಯಾವುದೇ ಬೆಲೆ ತೆತ್ತಾದರೂ ಅವರನ್ನು ಅಯೋಧ್ಯೆಯಿಂದ ಹೊರಗೆ ಕಳುಹಿಸುತ್ತೇವೆ. ಅದರ ನಂತರ ದೀಪಾವಳಿಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ” ಎಂದು ಹೇಳಿದರು.
ಮತ್ತೆ ತನ್ನ ಮಾತು ಮುಂದುವರಿಸುತ್ತಾ, ಮುಸ್ಲಿಮರಿಗೆ ಅಯೋಧ್ಯೆಯಲ್ಲಿ ಯಾವುದೇ ಕೆಲಸವಿಲ್ಲ ಮತ್ತು ಅವರು ಜಿಲ್ಲೆಯನ್ನು ತೊರೆದು ಸರಯೂ ನದಿಯನ್ನು ದಾಟಿ ವಲಸೆ ಹೋಗಬೇಕು ಎಂದು ಕಟಿಯಾರ್ ಹೇಳಿದರು.
ಕಟಿಯಾರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಫೈಝಾಬಾದ್ ಸಂಸದ ಅವಧೇಶ್ ಪ್ರಸಾದ್, ಕಟಿಯಾರ್ ಅವರು ಮಾನಸಿಕವಾಗಿ ದುರ್ಬಲರಾಗಿದ್ದಾರೆ. ಈ ದೇಶ ಯಾವುದೇ ಒಂದು ಧರ್ಮದ ಅನುಯಾಯಿಗಳಿಗೆ ಸೇರಿಲ್ಲ. ಇದು ಇಲ್ಲಿ ವಾಸಿಸುವ ಎಲ್ಲಾ ಧರ್ಮದ ಜನರಿಗೆ ಸೇರಿದೆ. ಅವರು ತಮ್ಮ ಮಾತುಗಳ ಮೇಲೆ ಹಿಡಿತವನ್ನು ಹೊಂದಿರಬೇಕು ಎಂದು ಹೇಳಿದರು.







