ಗುಜರಾತ್ | ಸ್ಥಳೀಯರ ವಿರೋಧ : ಜಮೀನಿನ ಮಾಲಿಕತ್ವ ಪಡೆಯಲು ಮುಸ್ಲಿಂ ಕುಟುಂಬ ಅಲೆದಾಟ; ವರದಿ

ಸಾಂದರ್ಭಿಕ ಚಿತ್ರ
ಅಹ್ಮದಾಬಾದ್ : ಗುಜರಾತ್ನ ವಡೋದರಾದಲ್ಲಿ ಸ್ಥಳೀಯ ಹಿಂದೂಗಳ ವಿರೋಧದಿಂದಾಗಿ ಮುಸ್ಲಿಂ ಕುಟುಂಬವೊಂದು ತಾವು ಖರೀದಿಸಿದ ಜಮೀನಿನ ಮಾಲಿಕತ್ವವನ್ನು ಪಡೆಯಲು ವರ್ಷಗಳಿಂದ ಸರಕಾರಿ ಕಚೇರಿಗಳಿಗೆ ಅಲೆದಾಟ ನಡೆಸುತ್ತಿದೆ ಎಂದು newslaundry.com ವರದಿ ಮಾಡಿದೆ.
ಫತೇಪುರದ ಚಂಪಾನೇರ್ ದರ್ವಾಝಾದಲ್ಲಿ ಅಲಿ ಮತ್ತು ಅವರ ಸೋದರ ಮಾವ 2016 ರಲ್ಲಿ ನಿವೇಶನವೊಂದನ್ನು ಖರೀದಿಸಿದ್ದರು. ಆ ಬಳಿಕ ತೊಂದರೆಗೊಳಗಾದ ಪ್ರದೇಶಗಳ ಕಾಯ್ದೆಯ(Disturbed Areas Act) ಅಡಿಯಲ್ಲಿ ಆಸ್ತಿಯನ್ನು ವರ್ಗಾಯಿಸಲು ಅನುಮತಿಗಾಗಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ವಜಾಗೊಳಿಸಲಾಗಿದೆ.
"ಈ ಅರ್ಜಿ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿತ್ತು. ಸಹಾಯಕ ಪೊಲೀಸ್ ಆಯುಕ್ತರು ಈ ಆಸ್ತಿಯನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಲು ಅನುಮತಿ ನೀಡಬಾರದು ಎಂದು ಸಲಹೆ ನೀಡಿದ್ದಾರೆ. ಆದ್ದರಿಂದ, ಆಸ್ತಿ ವರ್ಗಾವಣೆಗಾಗಿ ಸಲ್ಲಿಸಿದ ವಿನಂತಿಯನ್ನು ತಿರಸ್ಕರಿಸಲಾಗಿದೆʼ ಎಂದು ಅರ್ಜಿ ವಜಾಗೊಳಿಸುವಾಗ ಜಿಲ್ಲಾಡಳಿತ ಕಾರಣವನ್ನು ನೀಡಿದೆ.
ಆ ಬಳಿಕ ಅಲಿ ಕಂದಾಯ ಇಲಾಖೆಯನ್ನು ಸಂಪರ್ಕಿಸಿದ್ದಾರೆ ಆದರೆ ಅಲ್ಲಿಯೂ ಯಾವುದೇ ಪರಿಹಾರ ಸಿಗಲಿಲ್ಲ. ಕೊನೆಗೆ 2019ರಲ್ಲಿ ಗುಜರಾತ್ ಹೈಕೋರ್ಟ್ ಅವರಿಗೆ ಭೂಮಿಯ ಮಾಲಿಕತ್ವದ ಹಕ್ಕುಗಳನ್ನು ನೀಡಿತ್ತು. ಆದರೂ, ಈವರೆಗೆ ಅವರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ʼಸ್ಥಳೀಯ ಹಿಂದೂಗಳ ವಿರೋಧದಿಂದ ಭೂಮಿಯ ವರ್ಗಾವಣೆ ಸಾಧ್ಯವಾಗಿಲ್ಲ. ಆ ಪ್ರದೇಶದಲ್ಲಿ ನಾನು ಭೂಮಿಯ ಮಾಲಕತ್ವವನ್ನು ಹೊಂದಬಾರದೆಂದು ಬಿಜೆಪಿ ನಾಯಕರು, ಮಾಜಿ ಕಾರ್ಪೊರೇಟರ್ ಮತ್ತು ಇತರ ಸ್ಥಳೀಯರು ವಿರೋಧಿಸುತ್ತಿದ್ದಾರೆʼ ಎಂದು ಅಲಿ ಆರೋಪಿಸಿದ್ದಾರೆ.







